ಭಾರತ್ ಬಂದ್ ಹಿನ್ನಲೆ ಎರಡು ದಿನ ಬ್ಯಾಂಕುಗಳಿಗೆ ರಜೆ ಘೋಷಣೆ, ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಬೆಂಗಳೂರು,ಜ.8-ಭಾರತ್ ಬಂದ್ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕಳೆದ ತಿಂಗಳಷ್ಟೇ ಸತತ ಐದು ದಿನಗಳ ರಜೆ ಇದ್ದಿದ್ದರಿಂದ ಗ್ರಾಹಕರು ಪರದಾಡುವಂತಾಗಿತ್ತು.ಇದೀಗ 2 ದಿನ ಮತ್ತೆ ರಜೆ ಘೋಷಣೆ ಮಾಡಿರುವುದಕ್ಕೆ ಎಲ್ಲರೂ ಹಿಡಿ ಶಾಪ ಹಾಕುತ್ತಿದ್ದಾರೆ.

ವಾರದ ಪ್ರಾರಂಭದಲ್ಲೇ ಈ ರೀತಿ ರಜೆ ನೀಡಿದರೆ ನಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸುವುದಾದರೂ ಹೇಗೆ?ಅಷ್ಟಕ್ಕೂ ಬ್ಯಾಂಕ್ ನೌಕರರು ಎಂದಿನಂತೆ ಕೆಲಸ ಮಾಡಿದರೆ ಅವರನ್ನು ಯಾರು ವಿರೋಧಿಸುತ್ತಾರೆ ಎಂದು ಗ್ರಾಹಕರು ಪ್ರಶ್ನೆ ಮಾಡುತ್ತಿದ್ದ ದೃಶ್ಯ ಅನೇಕ ಬ್ಯಾಂಕ್‍ಗಳ ಮುಂದೆ ಕೇಳಿಬಂದಿತ್ತು.

ವಾರದ ಏಳು ದಿನದಲ್ಲಿ ಭಾನುವಾರ ರಜೆಯಿರುತ್ತದೆ.ಇನ್ನೂ 2 ಮತ್ತು 4ನೇ ಶನಿವಾರವೂ ಇದೇ ಸ್ಥಿತಿ.ಉಳಿದ ಶನಿವಾರ ಕೇವಲ ಅರ್ಧ ದಿನ ಮಾತ್ರ ಕೆಲಸ ನಿರ್ವಹಿಸುತ್ತಾರೆ. ಬಂದ್ ಆಚರಿಸಿದರೆ ಇವರೇಕೆ ರಜೆ ಮಾಡಬೇಕೆಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಎಟಿಎಂಗಳಲ್ಲಿ ಸರಿಯಾಗಿ ಹಣ ಹಾಕದೆ ನೋ ಕ್ಯಾಶ್ ಬೋರ್ಡ್‍ಗಳು ನೇತಾಡುತ್ತಿದ್ದು ಗ್ರಾಹಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಭಾನುವಾರ, 2 ಮತ್ತು 4ನೇ ಶನಿವಾರ, ಸರ್ಕಾರಿ ರಜೆಗಳಂದು ಬ್ಯಾಂಕ್ ಕಾರ್ಯಗಳು ನಡೆಯದೆ ಗ್ರಾಹಕರಿಗೆ ತೊಂದರೆಯಾಗುತ್ತಿದೆ.ಈ ನಡುವೆ ಮುಷ್ಕರ್, ಬಂದ್ ನೆಪದಲ್ಲಿ ಬ್ಯಾಂಕ್ ನೌಕರರು ಕೆಲಸ ನಿರ್ವಹಿಸದೇ ಇದ್ದರೆ, ಸಾಮಾನ್ಯ ನಾಗರೀಕರ ಪಾಡೇನು ಎಂಬುದು ಸಾರ್ವಜನಿಕರ ಅಳಲಾಗಿದೆ.

ಒಟ್ಟಾರೆ ಜನಸ್ನೇಹಿಯಾಗಬೇಕಾಗಿದ್ದ ಬ್ಯಾಂಕ್‍ಗಳು ಹೀಗೆ ರಜೆಗಳ ಮೇಲೆ ರಜೆಗಳನ್ನು ಘೋಷಿಸುತ್ತಾ ಜನರ ಪಾಲಿಗೆ ಕಂಟವಾಗಿವೆ ಎಂದು ನಾಗರೀಕರು ದೂರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ