ಬೆಂಗಳೂರು,ಜ.8- ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ಸಿಗದೆ ಇರುವ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರ ಬೆಂಬಲಿಗರು ಇಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು.
ಕೆಪಿಸಿಸಿ ಕಚೇರಿಯಿಂದ ಮೆರವಣಿಗೆ ಬಂದ ಸುಧಾಕರ್ ಬೆಂಬಲಿಗರು ಕೆಪಿಸಿಸಿ ಕಾರ್ಯಕಾರಿಣಿ ನಡೆಯುತ್ತಿದ್ದ ಗುರುನಾನಕ್ ಭವನಕ್ಕೆ ಮುತ್ತಿಗೆ ಹಾಕಿದರು.
ದುರುದ್ದೇಶ ಪೂರಿತವಾಗಿ ಸುಧಾಕರ್ ಅವರಿಗೆ ಸಚಿವ ಸ್ಥಾನ ತಪ್ಪಿಸಲಾಗಿದೆ.ನಿಗಮ ಮಂಡಳಿ ನೇಮಕಾತಿಗೆ ಕಾಂಗ್ರೆಸ್ ಶಿಫಾರಸು ಮಾಡಿದರೂ ಸಿಎಂ ಅದನ್ನು ಅಂಗೀಕಾರ ಮಾಡಿಲ್ಲ. ಈ ಮೂಲಕ ಸುಧಾಕರ್ ಅವರನ್ನು ರಾಜಕೀಯವಾಗಿ ತುಳಿಯುವ ಹುನ್ನಾರ ನಡೆಯುತ್ತಿದೆ.ಕೂಡಲೇ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಬೆಂಬಲಿಗರು ಒತ್ತಾಯಿಸಿದರು.
ಗುರುನಾನಕ್ ಭವನದ ಮುಂದೆ ಧರಣಿ ನಡೆಸಿದ ಬೆಂಬಲಿಗರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮಾಧಾನಪಡಿಸಿದರಲ್ಲದೆ ಸುಧಾಕರ್ ಅವರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.