ವಾಷಿಂಗ್ಟನ್/ನವದೆಹಲಿ, ಜ.8- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಿನ್ನೆ ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದ್ದಾರೆ. ಇವರಿಬ್ಬರ ಸಂಭಾಷಣೆ ವೇಳೆ ದ್ವಿಪಕ್ಷೀಯ ವಿಷಯಗಳು ಚರ್ಚೆಗೆ ಬಂದವು.
ಆಫ್ಘಾನಿಸ್ತಾನದ ಅಭಿವೃದ್ಧಿ ವಿಷಯದಲ್ಲಿ ಪರಸ್ಪರ ಸಹಕಾರ, ವಾಣಿಜ್ಯ ಮೋದಿ-ಟ್ರಂಪ್ ನಡುವಿನ ಮಾತುಕತೆಯ ಪ್ರಮುಖ ವಿಷಯಗಳಾಗಿವೆ. 2019ರಲ್ಲಿ ಅಮೆರಿಕ-ಭಾರತ ನಡುವಿನ ಕಾರ್ಯ ತಂತ್ರದ ಪಾಲುದಾರಿಕೆಯನ್ನು ಬಲಿಷ್ಠಗೊಳಿಸುವ ಬಗ್ಗೆ ಉಭಯ ನಾಯಕರೂ ಚರ್ಚಿಸಿದ್ದು, ಅಮೆರಿಕ-ಭಾರತದ ನಡುವಿನ ವಾಣಿಜ್ಯ ಅಂತರವನ್ನು ಕಡಿಮೆ ಮಾಡುವುದರ ಬಗ್ಗೆ ಮಾತನಾಡಿದ್ದಾರೆ.
ಅಮೆರಿಕ-ಭಾರತದ ನಡುವೆ ವ್ಯಾಪಾರ ವಿತ್ತೀಯ ಕೊರತೆಯನ್ನು ಕೊನೆಗೊಳಿಸಲು ಅಮೆರಿಕ ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವ ಉಕ್ಕು ಹಾಗೂ ಅಲ್ಯುಮಿನಿಯಂಗೆ ಹೆಚ್ಚಿನ ತೆರಿಗೆ ವಿಧಿಸಿದ್ದರು.
ಈ ಬೆನ್ನಲ್ಲೇ ಭಾರತವೂ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ತೆರಿಗೆ ಹೆಚ್ಚು ವಿಧಿಸುವುದಾಗಿ ಹೇಳಿತ್ತು.
ಇವರಿಬ್ಬರ ನಡುವೆ ದ್ವಿಪಕ್ಷೀಯ ವಿಷಯಗಳ ನಡುವೆ ಸಮಾಲೋಚನೆ ನಡೆದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಉಭಯ ದೇಶಗಳ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.