ತಿರುವನಂತಪುರಂ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿರುವ ಬೆನ್ನಲ್ಲೇ ಕೇರಳದಲ್ಲಿ ಭುಗಿಲೆದ್ದ ಪ್ರತಿಭಟನೆ, ಹಿಂಸಾಚಾರಗಳು ಇನ್ನೂ ಮುದುವರೆದಿದ್ದು, ಕಿಡಿಗೇಡಿಗಳು ಸಿಪಿಐ(ಎಂ) ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರ ಮನೆಗಳ ಮೇಲೆ ಕಚ್ಚಾ ಬಾಂಬ್ ದಾಳಿ ನಡೆಸಿದ್ದಾರೆ.
ಕೋಯಿಕ್ಕೋಡ್ ಜಿಲ್ಲೆಯಲ್ಲಿ ಸಿಪಿಐ(ಎಂ) ಹಾಗೂ ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ದೇಶೀಯ ನಿರ್ಮಿತ ಬಾಂಬ್ ದಾಳಿಗಳನ್ನು ನಡೆಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಕೊಯಿಲಾಂಡಿ ಪ್ರದೇಶ ಸಮಿತಿ ಸದಸ್ಯ ಶಿಜು ಅವರ ಮನೆಯ ಮೇಲೆ ಮೊದಲ ದಾಳಿ ನಡೆದಿದ್ದು, ಸ್ಥಳೀಯ ಬಿಜೆಪಿ ಪಕ್ಷದ ನಾಯಕ ವಿ.ಕೆ.ಮುಕುಂದನ್ ಮನೆ ಮೇಲೂ ಕಚ್ಚಾ ಬಾಂಬ್ಗಳಿಂದ ದಾಳಿ ಮಾಡಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರ ಜೀವಕ್ಕೂ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಸೋಮವಾರವಷ್ಟೇ ಕೊಯಿಲಾಂಡಿಯಲ್ಲಿರುವ ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ದೇಶೀಯ ನಿರ್ಮಿತ ಬಾಂಬ್ಗಳನ್ನು ಎಸೆಯಲಾಗಿತ್ತು. ಅದೇ ವೇಳೆ ಕಣ್ಣೂರಿನಲ್ಲಿ ಸುಮಾರು 18 ಕಚ್ಚಾ ಬಾಂಬ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಬಿಂದು ಮತ್ತು ಕನಕದುರ್ಗ ಎಂಬ ಮಹಿಳೆಯರು ಕಳೆದ ಬುಧವಾರ ಅಯ್ಯಪ್ಪ ದೇವಸ್ಥಾನವನ್ನು ಪ್ರವೇಶಿಸಿ ದರ್ಶನ ಪಡೆದು ಬಂದಿದ್ದರು. ಇದಾದ ಬಳಿಕ ಕೇರಳ ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದಿದ್ದು, ಇನ್ನೂ ಕಡಿಮೆ ಆಗಿಲ್ಲ.
ಶಬರಿಮಲೆ ಹಿಂಸಾಚಾರ ಸಂಬಂಧ ಇದುವರೆಗೂ 2,187 ಪ್ರಕರಣ ದಾಖಲಾಗಿದ್ದು, 6,914 ಮಂದಿಯನ್ನು ಬಂಧಿಸಲಾಗಿದೆ.
Crude bombs hurled at CPI(M), BJP workers’ homes over Sabarimala issue