ನವದೆಹಲಿ: ರಾಫೆಲ್ ಯುದ್ದ ವಿಮಾನ ಖರೀದಿ ಒಪ್ಪಂದ ತನಿಖೆಯಿಂದ ಪ್ರಧಾನಿ ಮೋದಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂಸತ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಕಡ್ಡಾಯ ರಜೆಯನ್ನು ಹಿಂಪಡೆದು ಮತ್ತೆ ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ ಮುಂದುವರಿಯುವಂತೆ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್ನ ತೀರ್ಪನ್ನ ಸ್ವಾಗತಿಸುವುದಾಗಿ ತಿಳಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿನಿಂದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ. ರಫೇಲ್ ಯುದ್ಧ ವಿಮಾನ ಒಪ್ಪಂದ ಕುರಿತಂತೆ ವಿಚಾರಣೆ ನಡೆಸಲು ಮುಂದಾಗಿದ್ದರಿಂದಾಗಿ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಅವರನ್ನು ತಡರಾತ್ರಿ 1 ಗಂಟೆ ವೇಳೆಗೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಆದರೆ ಇಂದು ಅವರನ್ನು ಮತ್ತೆ ಸಿಬಿಐ ನಿರ್ದೇಶಕರಾಗಿ ಮುಂದುವರಿಯುವಂತೆ ನ್ಯಾಯಾಲಯ ಆದೇಶ ನೀಡಿದ್ದು ಸ್ವಾಗತಾರ್ಹ. ಈಗ ರಾಫೆಲ್ ಯುದ್ದ ವಿಮಾನ ಖರೀದಿ ಒಪ್ಪಂದದ ತನಿಖೆಯಿಂದ ಪ್ರಧಾನಿ ಮೋದಿ ಹಾಗೂ ಸರ್ಕಾರವನ್ನು ಯಾರಿಂದಲೂ ಬಚಾವ್ ಮಾಡಲು ಅಸಾಧ್ಯ ಎಂದು ಗುಡುಗಿದ್ದಾರೆ.
ಅಲೋಕ್ ವರ್ಮಾ ಅವರೇ ಸಿಬಿಐ ನಿರ್ದೇಶಕರಾಗಿ ಮುಂದುವರೆಯಲು ಸುಪ್ರೀಂಕೋರ್ಟ್ ಅವಕಾಶ ನೀಡಿರುವುದರಿಂದ ನಮ್ಮಗೆ ಸ್ವಲ್ಪ ನೆಮ್ಮದಿ ಸಿಕ್ಕಂತಾಗಿದೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾಯ್ದು ನೋಡಿ ಎಂದ ರಾಹುಲ್, ರಾಫೆಲ್ ಒಪ್ಪಂದ ಸಂಬಂಧದ ಚರ್ಚೆಯಿಂದ ಮೋದಿ ಓಡಿಹೋಗಬಹುದು. ಆದರೆ, ಅವರು ಸುಲಭವಾಗಿ ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಗರಣ ನಡೆದಿರುವುದು ಸತ್ಯ. ಹೀಗಾಗಿ ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಜನತಾ ನ್ಯಾಯಾಲಯದ ಎದುರು ಈ ವಿವಾದ ಸಂಬಂಧ ನಮ್ಮೊಂದಿಗೆ ಅವರು ಚರ್ಚೆ ನಡೆಸಬೇಕಾಗಿದೆ ಎಂದಿದ್ದಾರೆ.
No one can save PM Modi from Rafale probe: Rahul Gandhi