ಮೇಲ್ಜಾತಿಗೆ ಶೇ. 10 ಮೀಸಲಾತಿ ಮಸೂದೆ ಲೋಕಸಭೆ ಮುಂದಿಟ್ಟ ಕೇಂದ್ರ

ನವದೆಹಲಿಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿಗೆ ಶೇಕಡ 10 ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯ ಮುಂದೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಇರಿಸಿದೆ. ಈ ಬಗ್ಗೆ ಕೇಂದ್ರ ಮಂತ್ರಿ ಮಂಡಲ ಸೋಮವಾರ ಒಮ್ಮತದ ನಿರ್ಧಾರ ತಳೆದಿತ್ತು. ಕೇಂದ್ರದ ಈ ನಿರ್ಧಾರಕ್ಕೆ ಪರ ಮತ್ತು ವಿರೋಧದ ಕೂಗು ಕೇಳಿಬಂದಿದ್ದವು.

ವಿಪಕ್ಷಗಳಾದ ಕಾಂಗ್ರೆಸ್​, ಬಿಎಸ್​ಪಿ, ಎಸ್​ಪಿ ಮುಂತಾದ ಪಕ್ಷಗಳು ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ ಶೇಕಡ 10 ಮೀಸಲಾತಿ ನೀಡುವ ನಿರ್ಧಾರ ಕೇವಲ ರಾಜಕೀಯ ತಂತ್ರ ಎಂದು ಜರೆದಿತ್ತು. ಜತೆಗೆ ಸಾಂವಿಧಾನಿಕ ಮಸೂದೆಯನ್ನು ಸಂಸತ್​​ ಮುಂದಿಡುವಂತೆ ಸವಾಲು ಹಾಕಿತ್ತು. ಇಲ್ಲವಾದಲ್ಲಿ ಇದೊಂದು ಚುನಾವಣಾ ತಂತ್ರ ಎಂಬುದನ್ನು ಒಪ್ಪಿಕೊಳ್ಳುವಂತೆ ಹೇಳಿತ್ತು. ಈಗ ಕೇಂದ್ರ ಸರ್ಕಾರ ನಿರೀಕ್ಷೆಯಂತೆ ಸಾಂವಿಧಾನಿಕ ಮಸೂದೆಯನ್ನು ಸಂಸತ್​ನ ಮುಂದಿರಿಸಿದೆ.

ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎಗೆ ಬಹುಮತವಿದ್ದು, ಮಸೂದೆಯನ್ನು ಅಂಗೀಕಾರ ಮಾಡುವುದು ಸುಲಭ. ಆದರೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಬಹುಮತ ಹೊಂದಿತ್ತು, ಮಸೂದೆ ಜಾರಿಯಾಗಬೇಕಾದರೆ ವಿರೋಧ ಪಕ್ಷಗಳ ಸಹಾಯ ಕೇಂದ್ರಕ್ಕೆ ಬೇಕು. ಈಗಾಗಲೇ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಸೇರಿದಂತೆ ಹಲವು ರಾಜಕೀಯ ನಾಯಕರು ಮಸೂದೆಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲೂ ಮೀಸಲಾತಿ ಮಸೂದೆಗೆ ಅಂಗೀಕಾರ ಸಿಗಲಿದೆಯಾ ಎಂದು ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ