ಬೆಂಗಳೂರು, ಜ.8-ಕಲ್ಲು ಕ್ವಾರಿ ಗಣಿಗಾರಿಕೆಯಲ್ಲಿ ಅಕ್ರಮಗಳನ್ನು ತಡೆಯಲು ಡ್ರೋಣ್ ಮತ್ತು ಜಿಪಿಆರ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುತ್ತಿರುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಜೇಂದ್ರಕುಮಾರ್ ಕಠಾರಿಯ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರೀ ಪ್ರಮಾಣದ ಅದಿರಿಗಿಂತಲೂ ಮರಳು, ಕಲ್ಲು ಕ್ವಾರಿಯಂತಹ ಸಣ್ಣ ಪ್ರಮಾಣದ ಅದಿರುಗಳಿಂದ ಇತ್ತೀಚೆಗೆ ಹೆಚ್ಚಿನ ಆದಾಯ ಬರುತ್ತಿದೆ. ಈ ಮೊದಲು ಕಬ್ಬಿಣ ಮ್ಯಾಂಗನೀಸ್ನಂತಹ ಭಾರೀ ಪ್ರಮಾಣದ ಅದಿರುಗಳಿಂದ ಸರ್ಕಾರದ ಬೊಕ್ಕಸಕ್ಕೆ ಶೇ.55ರಷ್ಟು ಆದಾಯ ಬರುತ್ತಿತ್ತು.
ಮರಳು ಮತ್ತು ಕಲ್ಲುಕ್ವಾರಿಯಂತ ಸಣ್ಣ ಪ್ರಮಾಣದ ಗಣಿ ಉತ್ಪನ್ನಗಳಿಂದ ಶೇ.45ರಷ್ಟು ಆದಾಯ ಬರುತ್ತಿತ್ತು. ಈಗ ಪರಿಸ್ಥಿತಿ ತಿರುವುಮರಗಾಗಿದ್ದು, ಸಣ್ಣ ಪ್ರಮಾಣದ ಅದಿರುಗಳಿಂದಲೇ ಶೇ.55ರಷ್ಟು ಆದಾಯ ಬರುತ್ತಿದೆ. 2017-18ರಲ್ಲಿ 2500 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ಆರ್ಥಿಕ ವರ್ಷದಲ್ಲಿ 3000 ಕೋಟಿ ಗುರಿಯಿದ್ದು, ಅದಕ್ಕಿಂತಲೂ ಹೆಚ್ಚಿನ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ.ಮುಂದಿನ ವರ್ಷ ಇನ್ನಷ್ಟು ಆದಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.
ಕಲ್ಲುಗಾರಿಕೆ ಮತ್ತು ಮರುಳು ಗಣಿಗಾರಿಕೆಯಲ್ಲಿ ಅನುಮತಿಯನ್ನೂ ಮೀರಿ ಉತ್ಪನ್ನಗಳನ್ನು ತೆಗೆಯುತ್ತಿರುವ ಆರೋಪವಿದೆ. ಹೀಗಾಗಿ ಅದಕ್ಕೆ ಡ್ರೋಣ್ ಸರ್ವೆ ನಡೆಸಲಾಗುತ್ತಿದೆ. ಗಣಿಗಾರಿಕೆಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ಗುರುತಿಸಲು ಜಿಪಿಆರ್ಎಸ್ ತಂತ್ರಜ್ಞಾನ ಬಳಸಲಾಗುತ್ತಿದೆ. ಮಾರ್ಚ್ ವೇಳೆಗೆ ಈ ಸಮೀಕ್ಷೆ ಮುಕ್ತಾಯಗೊಳ್ಳಲಿದ್ದು, ಅಧಿಕಾರಿಗಳು ಕೂಡ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.ಇದರಿಂದ ಮುಂದಿನ ದಿನಗಳಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಲೇಷ್ಯಾ ಮರಳು ದುಬಾರಿ:
ಸ್ಥಳೀಯ ಬೇಡಿಕೆಯನ್ನು ಪೂರೈಸಲು ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳಲಾಗುತ್ತಿದೆ.ಆದರೆ ಅಲ್ಲಿನ ಸಾಗಾಣಿಕೆಯ ವೆಚ್ಚ ದುಬಾರಿಯಾಗಿದ್ದು, ಇಲ್ಲಿ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಆಮದು ಮರಳು ವ್ಯಾಪಾರ ಯಶಸ್ವಿಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಿಯಮಗಳನ್ನು ಸರಲೀಕರಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.