ಬೆಂಗಳೂರು,ಜ.8-ಸಚಿವ ಎಚ್.ಡಿ.ರೇವಣ್ಣ ಎಲ್ಲಾ ವಿಚಾರಕ್ಕೂ ಮಧ್ಯೆ ಬಾಯಿ ಹಾಕುತ್ತಿದ್ದಾರೆ. ಅವರು ಸಂಪುಟದ ಮಂತ್ರಿಯಷ್ಟೇ.ಸೂಪರ್ ಸಿಎಂ ಅಲ್ಲ ಎಂದು ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಎಂ.ರೇವಣ್ಣ ಟಾಂಗ್ ನೀಡಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮುವಾದಿ ಪಕ್ಷವನ್ನು ದೂರವಿಡಲು ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ಮಾಡಿದ್ದೇವೆ. ಇದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು.ಜೆಡಿಎಸ್ನಲ್ಲಿ ಎಲ್ಲರೂ ಮಾತನಾಡುತ್ತಾರೆ.ನಮ್ಮ ಪಕ್ಷದಲ್ಲಿ ಬಿಗಿ ಇದೆ. ಎಚ್.ಡಿ.ರೇವಣ್ಣ ಅವರು ಎಲ್ಲಾ ವಿಚಾರಕ್ಕೂ ಮೂಗು ತೂರಿಸುತ್ತಿದ್ದಾರೆ ಎಂದರು.
ಅವರು ಸಂಪುಟದ ಸಚಿವರಾಗಿದ್ದಾರೆ.ಆದರೆ ಸೂಪರ್ ಸಿಎಂ ಅಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕು. ಕಳೆದ 15 ದಿನಗಳಿಂದ ಎಲ್ಲರೂ ಮಾತನಾಡಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.
ನಿಗಮ ಮಂಡಳಿ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರೇ ಸಿದ್ಧಪಡಿಸಿದ್ದರು.ಆದರೆ ಯಾವ ಕಾರಣಕ್ಕೆ ತಡೆಹಿಡಿದಿದ್ದಾರೋ ಗೊತ್ತಿಲ್ಲ. ಇಂದು ಪಕ್ಷದ ಉಸ್ತುವಾರಿ ವೇಣುಗೋಪಾಲ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.ಅವರು ಚರ್ಚಿಸಿ ಸಮಸ್ಯೆ ಪರಿಹರಿಸುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.