
ಬೆಂಗಳೂರು,ಜ.8- ಲೋಕಸಭೆ ಚುನಾವಣೆಗೆ ತಯಾರಿ ನಡೆಸುವ ಸಂಬಂಧ ಬೆಂಗಳೂರಿನಲ್ಲಿಂದು ಕಾಂಗ್ರೆಸ್ ಎಲ್ಲಾ ಜಿಲ್ಲೆಗಳ ಅಧ್ಯಕ್ಷರ ಮತ್ತು ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಸಿತು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಭೆಯ ನೇತೃತ್ವ ವಹಿಸಿದ್ದರು.
ಪ್ರಚಾರ ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ , ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮುಖಂಡರಾದ ಮೋಟಮ್ಮ, ಸಲೀಂ ಅಹಮ್ಮದ್, ಮತ್ತಿತರರು ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಹಿರಿಯ ನಾಯಕರುಗಳು, ಶಕ್ತಿ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ಇದರ ಯಶಸ್ಸಿಗೆ ಎಲ್ಲ ಪ್ರಮುಖರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರಬೇಕಾದರೆ ತಳಮಟ್ಟದಿಂದಲೂ ಪಕ್ಷವನ್ನು ಬಲಗೊಳಿಸಬೇಕು.ಹೀಗಾಗಿ ಪ್ರಿಯದರ್ಶಿನಿ, ಶಕ್ತಿಯಂತಹ ಯೋಜನೆಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸಬೇಕು.
ಮುಂಚೂಣಿ ಘಟಕಗಳು ಹೆಚ್ಚು ಕೆಲಸ ಮಾಡಬೇಕು.ಈ ನಿಟ್ಟಿನಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು, ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು, ಬ್ಲಾಕ್ ಘಟಕಗಳ ಮೇಲೆ ಒತ್ತಡ ಹಾಕುವಂತೆ ಮನವಿ ಮಾಡಿದರು.
ಕೆಲಸ ಮಾಡದೇ ಇರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆ ಮಾಡಲು ಕೆಪಿಸಿಸಿಗೆ ಶಿಫಾರಸ್ಸು ಮಾಡುವಂತೆ ಅಧ್ಯಕ್ಷ ದಿನೇಶ್ ಗುಂಡೂರಾವ್ ಜಿಲ್ಲಾಧ್ಯಕ್ಷರಲ್ಲಿ ಮನವಿ ಮಾಡಿದರು.
ದೀರ್ಘ ಕಾಲ ನಡೆದ ಚರ್ಚೆಯಲ್ಲಿ ಜಿಲ್ಲಾಧ್ಯಕ್ಷರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.ಜೆಡಿಎಸ್ನೊಂದಿಗೆ ಹೊಂದಾಣಿಕೆ ಮತ್ತು ಮೈತ್ರಿ ಸರ್ಕಾರದ ನಿಲುವುಗಳ ಬಗ್ಗೆಯೂ ವ್ಯಾಪಕ ಚರ್ಚೆ ನಡೆದಿದೆ.
ಮೈತ್ರಿ ಪಕ್ಷವಾದ ಜೆಡಿಎಸ್ ದಬ್ಬಾಳಿಕೆಯ ರಾಜಕಾರಣ ನಡೆಸುತ್ತಿದೆ ಎಂದು ಹಾಸನ ಜಿಲ್ಲಾಧ್ಯಕ್ಷ ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನಿಗಮಮಂಡಳಿಗಳಿಗೆ ಕೇವಲ ಶಾಸಕರನ್ನೇ ನೇಮಿಸಿದರೆ ಹೇಗೆ?ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುವುದಿಲ್ಲವೇ, ಲೋಕಸಭೆಯಲ್ಲಿ ಶಾಸಕರು ಮಾತ್ರವೇ ದುಡಿಯುತ್ತಾರೆಯೇ?ಎಂದು ಪ್ರಶ್ನಿಸಿದರು.