ತುಮಕೂರು, ಜ.8- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ಗೆ ತುಮಕೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುಂಜಾನೆಯಿಂದ ಎಂದಿನಂತೆ ಸಾರಿಗೆ ವಾಹನಗಳು ಸಂಚಾರ ನಡೆಸುತ್ತಿದ್ದು, ಜನರ ಸಂಚಾರ ಸಹ ಎಂದಿನಂತಿತ್ತು. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, 10 ಗಂಟೆ ಬಳಿಕ ವಿವಿಧ ಸಂಘಟನೆಯವರು ಬೈಕ್ ರ್ಯಾಲಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಕೆಲ ಖಾಸಗಿ ಬಸ್ಗಳು ರಸ್ತೆಗಿಳಿಯದೇ ಬಂದ್ಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ಇನ್ನೂ ಇಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳಾದ ರಾಕೇಶ್ ಕುಮಾರ್ ಅವರು ರಜೆ ಘೋಷಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.
ನಿನ್ನೆ ಸಂಜೆಯೇ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಅವರು ಅವರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳು ನೆಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಅಲ್ಲದೆ ಬಲವಂತವಾಗಿ ಬಂದ್ ಮಾಡಿಸುವುದು ಗಲಾಟೆ ಮಾಡುವುದು ಕಂಡು ಬಂದರೆ ಮುಲಾಜ್ ಇಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಖಡಕ್ ಅದೇಶ ನೀಡಿದ್ದರು.
ಇಂದು ಬೆಳಗಿನ ಜಾವ 4 ಗಂಟೆಯಿಂದಲೇ ತುಮಕೂರು ನಗರದಾದ್ಯಂತ ಡಿವೈಎಸ್ಪಿ ತಿಪ್ಪೇಸ್ವಾಮಿ, ಇನ್ಸ್ಪೆಕ್ಟರ್ಗಳಾದ ಪಾರ್ವತಮ್ಮ, ಚಂದ್ರಶೇಖರ್, ಮಧುಸೂಧನ್, ರಾಘವೇಂದ್ರ, ರಾಧಾಕೃಷ್ಣ, ರಾಮಕೃಷ್ಣ, ಸೇರಿದಂತೆ ಸಬ್ ಇನ್ಸ್ಪೆಕ್ಟರ್ಗಳು, ಸಿಬ್ಬಂದಿಗಳು, ಹೋಂ ಗಾರ್ಡ್ ಸೇರಿದಂತೆ 200 ಕ್ಕೂ ಹೆಚ್ಚು ಮಂದಿಯನ್ನು ಬಂದೋಬಸ್ತ್ಗೆ ನಿಯೋಜನೆ ಮಾಡಲಾಗಿತ್ತು.
ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳಾದ ಡಾ.ದಿವ್ಯಾ ಗೋಪಿನಾಥ್ ಹೆಚ್ಚುವರಿ ಪೊಲಿಸ್ ವರಿಷ್ಠಾಧಿಕಾರಿಗಳಾದ ಡಾ.ಶೋಭಾ ರಾಣಿ ಇವರು ಸಂಚರಿಸಿ ಬಂದೋಬಸ್ತ್ ಪರಿಶೀಲನೆ ನಡೆಸಿದರು.
ತುಮಕೂರು ನಗರದ ಹೊರ ಬಾಗದಲ್ಲಿ ಇರುವ ಪ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ನಾಲ್ಕು ದಿಕ್ಕಿನಿಂದ ಬಂದ ಕಾರ್ಮಿಕರು ನಗರದ ಟೌನ್ಹಾಲ್ನಲ್ಲಿ ಜಮಾವಣೆಗೊಂಡರು. ಇಲ್ಲಿ ಸುಮಾರು ಮೂರು ಸಾವಿರಕ್ಕೆ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.