ಬೆಂಗಳೂರು,ಜ.8-ಬೆಂಕಿ ಬಿದ್ದಾಗ ಮೈ ಬೆಚ್ಚಗೆ ಮಾಡಿಕೊಂಡರು ಎಂಬ ಗಾದೆಯಂತೆ ಭಾರತ್ ಬಂದ್ ಹಿನ್ನೆಲೆಯಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಪ್ರಯಾಣಿಕರಿಂದ ಸುಲಿಗೆಗಿಳಿದಿದ್ದಾರೆ.
ರಾಜಧಾನಿ ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಅನೇಕ ಕಡೆ ಆಟೋ ಮತ್ತು ಟ್ಯಾಕ್ಸಿ ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪ್ರಯಾಣಿಕರಿಂದ ಆರೋಪ ಕೇಳಿಬಂದಿದೆ.
ಬೆಳಗ್ಗಿನಿಂದಲೇ ಅನೇಕ ಕಡೆ ಮುನ್ನೆಚ್ಚರಿಕೆ ಕ್ರಮವಾಗಿ ಬಸ್‍ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.ಆಸ್ಪತ್ರೆಗೆ ಹೋಗುವವರು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಖಾಸಗಿ ಕಚೇರಿ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಅನಿವಾರ್ಯವಾಗಿ ಆಟೋ ಮತ್ತು ಟ್ಯಾಕ್ಸಿಗಳನ್ನೇ ಅವಲಂಬಿಸಬೇಕಾಯಿತು.
ಇದನ್ನೇ ಕಾಯುತ್ತಿದ್ದ ಆಟೋ ಹಾಗೂ ಟ್ಯಾಕ್ಸಿ ಚಾಲಕರು ನಿಗದಿ ಪಡಿಸಿದ್ದಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿತ್ತು.ಪ್ರಯಾಣಿಕರಂತೂ ಹಿಡಿ ಶಾಪ ಹಾಕಿಯೇ ಹಣ ನೀಡುತ್ತಿದ್ದರು.
ವಾಸ್ತವವಾಗಿ ಇಂದಿನ ಬಂದ್‍ಗೆ ಆಟೋ ಚಾಲಕರು ನೈತಿಕ ಬೆಂಬಲ ಸೂಚಿಸಿದ್ದರು.ಆದರೆ ನಾವು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು.ಮೆಜೆಸ್ಟಿಕ್‍ನಿಂದ ಮಲ್ಲೇಶ್ವರಂಗೆ 200ರೂ.ಕೇಳಿದರೆ, ಯಶವಂತಪುರದಿಂದ ಮೆಜೆಸ್ಟಿಕ್‍ಗೆ 250 ರಿಂದ 300ರೂ.ವಸೂಲಿ ಮಾಡುತ್ತಿದ್ದರು.ಇನ್ನು ಓಲಾ, ಊಬರ್ ಕೂಡ ಇದಕ್ಕೆ ಹೊರತಾಗಿರಲಿಲ್ಲ.
ಯಾರೋ ಮಾಡಿದ ತಪ್ಪಿಗಾಗಿ ನಾವು ದಂಡ ತೆರಬೇಕಾಗುತ್ತಿದೆ.ಸರ್ಕಾರ ಯಾವುದೇ ಕಾರಣಕ್ಕೂ ಯಾವುದೇ ಸಂಘಟನೆಗಳಿಗೆ ಬಂದ್ ಕರೆ ನೀಡಲು ಅವಕಾಶ ಕೊಡಬಾರದೆಂದು ಅಲವತ್ತುಕೊಂಡರು.