ಮುಜಾಫರ್ ಪುರ್ : ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದ ನಟ ಅನುಪಮ್ ಖೇರ್ ಹಾಗೂ ಇತರ 15 ಮಂದಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಬಿಹಾರದ ಮುಜಾಫರ್ ಪುರ್ ನ್ಯಾಯಾಲಯ ಆದೇಶಿಸಿದೆ.
ಚಿತ್ರದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಇತರ ಸಾರ್ವಜನಿಕ ಕ್ಷೇತ್ರದಲ್ಲಿರುವ ಹಲವರ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ವಕೀಲ ಸುದೀರ್ ಕುಮಾರ್ ಓಜಾ ಜನವರಿ 2 ರಂದು ದೂರು ದಾಖಲಿಸಿದ್ದರು. ಆ ದೂರಿನ ಆಧಾರದ ಮೇಲೆ ಎಫ್ ಐ ಆರ್ ದಾಖಲಿಸಿಕೊಳ್ಳುವಂತೆ ಉಪ ವಿಭಾಗೀಯ ನ್ಯಾಯಾಧೀಶ ಗೌರಬ್ ಕಮಾಲ್ ಕಾಂಟಿ ಪೊಲೀಸರಿಗೆ ಆದೇಶಿಸಿದ್ದಾರೆ.
ಮನಮೋಹನ್ ಸಿಂಗ್ ಮಾಧ್ಯಮ ಸಲಹೆಗಾರ ಸಂಜಯ್ ಬರು ಬರೆದಿರುವ ಪುಸ್ತಕ ಆಧಾರಿಸಿ ಈ ಚಿತ್ರ ಮಾಡಲಾಗಿದ್ದು, ಅನುಪಮ್ ಖೇರ್ ಮನಮೋಹನ್ ಸಿಂಗ್ ಪಾತ್ರದಲ್ಲಿ, ಅಕ್ಷಯ್ ಖನ್ನಾ ಸಂಜಯ್ ಬರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ, ಆರ್ ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಮತ್ತಿತರರ ಪಾತ್ರಗಳು ಚಿತ್ರದಲ್ಲಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಜನವರಿ 11 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಸಾರ್ವಜನಿಕ ಜೀವನದಲ್ಲಿ ಇರುವವರನ್ನು ಕೆಟ್ಟದಾಗಿ ತೋರಿಸುವ ಮೂಲಕ ದೇಶದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ನಡೆಸಲಾಗಿದೆ ಎಂದು ವಕೀಲ ಸುದೀರ್ ಕುಮಾರ್ ಓಜಾ ದೂರು ಸಲ್ಲಿಸಿದ್ದರು.






