ಸಿಡ್ನಿ, ಜ.7-ಆಸ್ಟ್ರೇಲಿಯಾ ನೆಲದಲ್ಲಿ ಆಸಿಸ್ ವಿರುದ್ಧ 2-1ರಲ್ಲಿ ತಮ್ಮ ತಂಡ ಐತಿಹಾಸಿಕ ಗೆಲುವು ದಾಖಲಿಸಿರುವುದಕ್ಕೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನನ್ನ ಅತಿದೊಡ್ಡ ಗೆಲುವಾಗಿದ್ದು, ಟೀಂ ಇಂಡಿಯಾಗೆ ವಿಭಿನ್ನ ಅಸ್ತಿತ್ವ ನೀಡಲಿದೆ ಎಂದು ಅವರು ಬಣ್ಣಿಸಿದ್ದಾರೆ.
ಎಂಟು ವರ್ಷಗಳ ಹಿಂದೆ ವಾಂಖಡೆ ಕ್ರೀಡಾಂಗಣದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಮಹಾನ್ ತಾರೆಗಳಿದ್ದ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಟ್ರೋಫಿ ಗೆದ್ದಾಗ ಅದರಲ್ಲಿ ಕೊಹ್ಲಿ ಅತ್ಯಂತ ಕಿರಿಯ ಆಟಗಾರರಾಗಿದ್ದರು. ವಿಶ್ವಕಪ್ ಗೆದ್ದ ಆಗಿನ ತಂಡದಲ್ಲಿ ಕೊಹ್ಲಿ ಇದ್ದರೂ ಕೂಡ ಎಲ್ಲಕ್ಕಿಂತಲೂ ಈ ಗೆಲುವು ವಿರಾಟ್ಗೆ ಅತಿದೊಡ್ಡ ಸಾದನೆ ಎನಿಸಿದೆ.
ಈ ಗೆಲವು ನನಗೆ ಅವಿಸ್ಮರಣೀಯ ವಿಜಯ. ಈ ವಿಜಯದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಕೊಹ್ಲಿ 71 ವರ್ಷಗಳ ಐತಿಹಾಸಿಕ ಗೆಲುವಿನ ನಂತರ ಸಿಡ್ನಿ ಮೈದಾನದಲ್ಲಿ ಪ್ರತಿಕ್ರಿಯಿಸಿದರು.
ನಮ್ಮದು ಅತ್ಯುತ್ತಮ ತಂಡ : ಪೂಜಾರ
ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವ ಸಾಧಿಸಿದ ಭಾರತದ ಕ್ರಿಕೆಟ್ ತಂಡದ ಸಾಧನೆ ಬಗ್ಗೆ ಸರಣಿಯ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಸಂತಸ ಮತ್ತು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ತಂಡವು ಅತ್ಯುತ್ತಮ ಟೀಮ್ ಆಗಿದೆ. ಈ ತಂಡದಲ್ಲಿ ನಾನು ಇರುವುದಕ್ಕೆ ಬಹಳ ಹೆಮ್ಮೆ ಎನಿಸುತ್ತದೆ ಎಂದು ಅವರು ಭಾರತದ ಚೊಚ್ಚಲ ಸರಣಿ ಜಯದ ನಂತರ ಪ್ರತಿಕ್ರಿಯಿಸಿದರು.
ಈ ಸರಣಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪೂಜಾರ, ನಾಲ್ಕು ಟೆಸ್ಟ್ಗಳ ಸರಣಿಯಲ್ಲಿ 3 ಭರ್ಜರಿ ಶತಕಗಳನ್ನು ಸಿಡಿಸಿ ಒಟ್ಟು 521 ರನ್ಗಳನ್ನು ಕಲೆ ಹಾಕಿ ಸರಣಿಯ ಯಶಸ್ವಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.