ಬೆಂಗಳೂರು, ಜ.7-ಕೇಂದ್ರ ಸರ್ಕಾರದ ಜನವಿರೋಧಿ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಜ.8 ಮತ್ತು 9 ರಂದು ಕರೆ ನೀಡಿರುವ ಮುಷ್ಕರಕ್ಕೆ ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳ ಒಕ್ಕೂಟ ಬೆಂಬಲ ನೀಡುವುದಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ಲಯನ್ ಮಂಜುನಾಥ್ ತಿಳಿಸಿದ್ದಾರೆ.
ಮುಷ್ಕರದ ಸಂದರ್ಭದಲ್ಲಿ ಆಟೋ ಬಂದ್ ಇರುವುದಿಲ್ಲ. ಆಟೋ ಸಂಚಾರ ಯಥಾಸ್ಥಿತಿ ಇರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಕೆಲವು ಆಟೋ ಸಂಘಟನೆಗಳು ಚಾಲಕರ ಹಿತಾಸಕ್ತಿ ಕಡೆಗಣಿಸಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.ನಮ್ಮ ಬೆಂಗಳೂರು ಆಟೋ ಚಾಲಕರ ಸಂಘ-ಸಂಸ್ಥೆಗಳ ಒಕ್ಕೂಟ ಮುಷ್ಕರವನ್ನು ಸರಾಸಗಟಾಗಿ ವಿರೋಧಿಸಿದೆ ಹಾಗೂ ಈ ಬಗ್ಗೆ ಚಾಲಕರಿಗೆ ಕಳೆದ ಮೂರು ದಿನಗಳಿಂದ ವಾಟ್ಸಾಪ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಆಟೋ ಮುಷ್ಕರಕ್ಕೆ ಸಂಬಂಧಿಸಿದಂತೆ ನಮ್ಮ ವಾಟ್ಸಾಪ್ ಹೇಳಿಕೆಯನ್ನು ತಿರುಚಿ ಪ್ರಕಟಿಸಿರುವುದರ ಜೊತೆಗೆ ವೈಯಕ್ತಿಕವಾಗಿ ನನ್ನ ಮತ್ತು ಸಂಘದ ಪದಾಧಿಕಾರಿಗಳ ಹೆಸರನ್ನು ತೇಜೋವಧೆ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸಿಪಿಎಂ ಪಕ್ಷದ ಮುಖವಾಣಿಯಾಗಿರುವ ಎಆರ್‍ಡಿಯು ನೇತೃತ್ವದಲ್ಲಿ ಪಕ್ಷದ ಸೂಚನೆಯಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ವಿರುದ್ಧ ಮುಷ್ಕರಕ್ಕೆ ಕರೆ ನೀಡಲಾಗಿದೆ.ಅವರಿಗೆ ಸಹಾಯ ಮತ್ತು ಬೆಂಬಲ ನೀಡುವ ಸಲುವಾಗಿ ಅಮಾಯಕ ಬಡ ಚಾಲಕರ ಇಲ್ಲದ ಸಮಸ್ಯೆ ಬಗ್ಗೆ ಚಾಲಕರಲ್ಲಿ ಗೊಂದಲ ಮೂಡಿಸಿ ಏಕಪಕ್ಷೀಯವಾಗಿ ಮತ್ತು ಚಾಲಕರ ಹೆಸರಲ್ಲಿ ಆರ್‍ಟಿಒ ಏಜೆಂಟ್‍ಗಳಂತೆ ಕಾರ್ಯನಿರ್ವಹಿಸಿ ಹಣ ಮಾಡುತ್ತಿರುವ ಕೆಲ ಸಂಘಟನೆಗಳ ಜೊತೆಗೂಡಿ ಮುಷ್ಕರ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಯಾವುದೇ ಕಾರಣವಿಲ್ಲದೆ, ಯಾರದೋ ಸಮಸ್ಯೆಗೆ ಆಟೋ ಚಾಲಕರ ಸಮಸ್ಯೆಗಳನ್ನು ಸುಖಾಸುಮ್ಮನೆ ಬಿಂಬಿಸಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿರುವುದನ್ನು ನಮ್ಮ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ.
ಕಾಳಸಂತೆಯಲ್ಲಿ 40 ರಿಂದ 45 ಸಾವಿರ ರೂಪಾಯಿಗಳು ಹಳೆಯ ಪರ್ಮಿಟ್ (ಟಾನ್ಸ್‍ಫರ್) ಹೆಸರಿನಲ್ಲಿ ಚಾಲಕರಿಂದ ವಸೂಲಿ ಮಾಡುತ್ತಿರುವ ಖಾಸಗಿ ಫೈನಾನ್ಸ್ ಕೆಲವು ಸಾರಿಗೆ ಅಧಿಕಾರಿಗಳ ಮಾಫಿಯಾಗೆ ಬೆಂಬಲವಾಗಿರುವ ಮಧ್ಯವರ್ತಿ ಸಂಘಟನೆಗಳ ಚಾಲಕ ವಿರೋಧಿ ಮುಷ್ಕರವಾಗಿರುವುದರಿಂದ ಇದಕ್ಕೆ ಬೆಂಬಲ ನೀಡುತ್ತಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಗಳು, ಸಾರಿಗೆ ಸಚಿವರು, ಆಟೋ ರಿಕ್ಷಾ ಚಾಲಕರ ಸಮಸ್ಯೆ ಬಗ್ಗೆ ಸಭೆ ಕರೆಯಲು ನಿರ್ಧರಿಸಿದ್ದರು.ಎಡಪಕ್ಷದ ಕೇಂದ್ರ -ರಾಜ್ಯ ಸರ್ಕಾರದ ಜನವಿರೋಧಿ ಹೋರಾಟದಲ್ಲಿ ಅಮಾಯಕ ಚಾಲಕರ ದುರ್ಬಳಕೆಗೆ ವಿರೋಧ ವ್ಯಕ್ತಪಡಿಸಿ ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ವತಿಯಿಂದ ಮುಷ್ಕರ ವಿರೋಧಿಸಲು ತೀರ್ಮಾನಿಸಲಾಗಿದೆ.