ನವದೆಹಲಿ, ಜ.7 (ಪಿಟಿಐ)- ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಜೊತೆ ಮಾಡಿಕೊಂಡ ಒಪ್ಪಂದಗಳನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ಲೋಕಸಭೆಯಲ್ಲಿ ಇಂದು ಈ ಬಗ್ಗೆ ಸಂಕ್ಷಿಪ್ತ ಹೇಳಿಕೆ ನೀಡಿದ ನಿರ್ಮಲಾ, ಎಚ್ಎಎಲ್ ಜೊತೆ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ. ಆದರೂ ಈ ಬಗ್ಗೆ ವಿನಾಕಾರಣ ರಾಹುಲ್ ಗಾಂಧಿ ಅವರು ಸಂಶಯ ವ್ಯಕ್ತಪಡಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಥಮ ಹಂತದಲ್ಲಿ 26,000 ಕೋಟಿ ರೂ.ಗಳ ಮೌಲ್ಯ ಕರಾರು ಒಪ್ಪಂದವನ್ನು ಮಂಜೂರು ಮಾಡಲಾಗಿದೆ.73,000 ಕೋಟಿ ರೂ. ಮೊತ್ತದ ಕಾರ್ಯಗಳು ಪ್ರಕ್ರಿಯೆಯಲ್ಲಿವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಎಚ್ಎಎಲ್ ಜೊತೆ 1 ಲಕ್ಷ ಕೋಟಿ ರೂ.ಗಳ ಒಪ್ಪಂದ ಕುರಿತು ಸುಳ್ಳು ಹೇಳುತ್ತಿದೆ. ಈ ಬಗ್ಗೆ ರಕ್ಷಣಾ ಸಚಿವರು ಸ್ಪಷ್ಟೀಕರಣ ನೀಡಬೇಕೆಂದು ರಾಹುಲ್ ಒತ್ತಾಯಿಸಿದ್ದರು.