ಬೆಂಗಳೂರು,ಜ.7-ಬಹುನಿರೀಕ್ಷಿತ ನಿಗಮಮಂಡಳಿಗೆ ಅಧ್ಯಕ್ಷರು, ಸಂಸದೀಯ ಕಾರ್ಯದರ್ಶಿಗಳು ನೇಮಕಾತಿ ಆದೇಶ ಹೊರಬೀಳುತ್ತಿದ್ದಂತೆ ದೋಸ್ತಿ ಸರ್ಕಾರದಲ್ಲಿ ಬೂದಿಮುಚ್ಚಿದ ಕೆಂಡಂತಿದ್ದ ಭಿನ್ನಮತ ಬೀದಿಗೆ ಬಿದ್ದಿದೆ.
ಒಬ್ಬರನ್ನು ಕಂಡರೆ ಮತ್ತೊಬ್ಬರು ಕತ್ತಿಮಸಿಯುವ ಪರಿಸ್ಥಿತಿ ಉಭಯ ಪಕ್ಷಗಳಲ್ಲಿ ಇತ್ತು. ಆದರೂ ಸರ್ಕಾರ ಸುಸೂತ್ರವಾಗಿ ನಡೆಯಲಿ ಎಂಬ ಕಾರಣಕ್ಕಾಗಿ ಹಲವು ಅತೃಪ್ತ ಶಾಸಕರು ತಮ್ಮ ಅಸಮಾಧಾನವನ್ನು ಹೊರಹಾಕಿರಲಿಲ್ಲ.
ಯಾವಾಗ ಭಾನುವಾರ ಸಂಜೆ ನಿಗಮಮಂಡಳಿಗಳ ಪಟ್ಟಿ ಹೊರಬಿತ್ತೋ ಅತೃಪ್ತ ಶಾಸಕರು ಮತ್ತೆ ಸರ್ಕಾರದ ಸಾರಥ್ಯವಹಿಸಿರುವವರ ಮೇಲೆ ಕೆಂಡ ಕಾರಿದ್ದಾರೆ.
ದೋಸ್ತಿ ಸರ್ಕಾರದ ಅಂಗಪಕ್ಷವಾದ ಜೆಡಿಎಸ್ ವಿರುದ್ಧ ಕಾಂಗ್ರೆಸ್ನ ಒಂದು ಬಣ ಕುದಿಯುತ್ತಿದ್ದು, ಯಾವ ಸಂದರ್ಭದಲ್ಲಾದರೂ ಇದು ಜ್ವಾಲೆಯಾಗಿ ಸ್ಫೋಟಿಸುವ ಸಾಧ್ಯತೆ ನಿಚ್ಚಳವಾಗಿದೆ.
ಅದರಲ್ಲೂ ಕಾಂಗ್ರೆಸ್ನಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡಿರುವ ಶಾಸಕರನ್ನೇ ಗುರಿಯಾಗಿಟ್ಟುಕೊಂಡು ನಿಗಮ ಮಂಡಳಿ ಮತ್ತು ಕೆಲವು ಸ್ಥಾನಗಳನ್ನು ತಪ್ಪಿಸಲಾಗಿದೆ ಎಂಬ ಭಾವನೆ ಮೂಡಿದೆ.
ತಮಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ದಳಪತಿಗಳ ಕುತಂತ್ರದಿಂದಲೇ ಕೈತಪ್ಪಿದೆ. ಪಕ್ಷದ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಶಿಫಾರಸ್ಸಿನ ಪತ್ರಕ್ಕೆ ಸಹಿ ಹಾಕದಿರುವುದು ಅನೇಕರ ಕಣ್ಣು ಕೆಂಪಾಗುವಂತೆ ಮಾಡಿದೆ.
ಅದರಲ್ಲೂ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ತಮ್ಮ ಬೆಂಬಲಿಗರ ಹಿತ ಕಾಪಾಡುವ ಉದ್ದೇಶದಿಂದ ಕೆಲವು ಶಾಸಕರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷರನ್ನು ಹಾಗೂ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದಾರೆ.
ಇತ್ತೀಚೆಗೆ ಸರ್ಕಾರದ ಎಲ್ಲ ವಿಷಯದಲ್ಲೂ ಸಿದ್ದರಾಮಯ್ಯನವರ ಕೈ ಮೇಲಾಗುತ್ತಿರುವುದು ದಳಪತಿಗಳಲ್ಲಿ ತಳಮಳ ಉಂಟು ಮಾಡಿತ್ತು.ಶಾಸಕರ ಭಿನ್ನಮತ ಮತ್ತೊಂದೆಡೆ ಕೈ ಭಿನ್ನಮತವನ್ನು ಪರಿಹರಿಸುವುದು, ಸಚಿವ ಸಂಪುಟ ಸ್ಥಾನಮಾನ ಸಿಗದೆ ಇರುವವರು ಸರ್ಕಾರದ ವಿರುದ್ಧ ಬಂಡೇಳುವಂತೆ ಮಾಡುವುದು ಇದೆಲ್ಲವೂ ಸಿದ್ದರಾಮಯ್ಯನವರ ಕೃಪಾಪೆÇೀಷದಿಂದಲೇ ನಡೆಯುತ್ತಿದೆ ಎಂಬ ಭಾವನೆ ಜೆಡಿಎಸ್ನಲ್ಲಿ ಮೂಡಿದೆ.
ಹೀಗಾಗಿ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಿದರೆ ಸರ್ಕಾರಕ್ಕೆ ಎದುರಾಗಿರುವ ಬಿಕ್ಕಟ್ಟು ಪರಿಹಾರವಾಗಲಿದೆ ಎಂಬ ಕಾರಣಕ್ಕಾಗಿಯೇ ಅವರು ಶಿಫಾರಸು ಮಾಡಿದ ನಿಗಮಮಂಡಳಿಗೆ ನಿಯೋಜನೆಗೊಂಡಿದ್ದವರ ಪಟ್ಟಿಯನ್ನು ಕುಮಾರಸ್ವಾಮಿ ತಿರಸ್ಕರಿಸಿದ್ದಾರೆ.
ಕೆಂಡ ಕಾರಿದ ಸುಧಾಕರ್:
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀವು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಪಮಾನ ಮಾಡಿದ್ದೀರಿ.ನಾನು ಪಕ್ಷದಲ್ಲಿ ದೊಡ್ಡವನಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಶಿಫಾರಸು ಮಾಡಿರುವ ಪತ್ರಕ್ಕೆ ಸಹಿ ಹಾಕುವುದಿಲ್ಲ ಎನ್ನುವುದಾದರೆ ಇದನ್ನು ನಿಮ್ಮ ಕುಟುಂಬದವರಿಗೆ ಕೊಟ್ಟುಬಿಡಿ ಎಂದು ಕಿಡಿಕಾರಿದರು.
ಇನ್ನು ಬಿಡಿಎಗೆ ನಿಯೋಜನೆಗೊಂಡಿದ್ದ ಯಶವಂಪುರ ಶಾಸಕ ಎಸ್.ಟಿ.ಸೋಮಶೇಖರ್ ಕೂಡ ಮುನಿಸಿಕೊಂಡಿದ್ದಾರೆ. ಅಲ್ಲದೆ ಅವರ ಬೆಂಬಲಿಗರಾದ ಇಬ್ಬರು ಬಿಬಿಎಂಪಿ ಸದಸ್ಯರು ಮತ್ತು ಇಬ್ಬರು ಜಿಲ್ಲಾ ಪಂಚಾಯ್ತಿ ಸದಸ್ಯರು ರಾಜೀನಾಮೆ ಕೊಡುವ ಬೆದರಿಕೆ ಹಾಕಿದ್ದಾರೆ.
ಹೀಗೆ ಕೈತಪ್ಪಿರುವ ಹಲವಾರು ಶಾಸಕರು ಮುನಿಸಿಕೊಂಡಿದ್ದು, ದೋಸ್ತಿ ಸರ್ಕಾರದಲ್ಲಿ ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.