ಬೆಂಗಳೂರು, ಜ.7- ರಾಜ್ಯದ ಹಲವೆಡೆ ಡೆಂಘೀ, ಚಿಕೂನ್ ಗುನ್ಯ, ಟೈಫಾಯ್ಡ್, ಮಂಗನ ಕಾಯಿಲೆ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡು ಜನರು ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಇದಕ್ಕೆ ಸ್ಪಂದಿಸಬೇಕಾದ ಆರೋಗ್ಯ ಇಲಾಖೆ ಕೆಲ ಅಧಿಕಾರಿಗಳ ಅಸಡ್ಡೆಯಿಂದ ಔಷಧಿಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕ ಆಸ್ಪತ್ರೆ ಹಾಗೂ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಔಷಧಿ ಲಭ್ಯತೆ ಇಲ್ಲದಿರುವ ಬಗ್ಗೆ ಆಗಾಗ ಆರೋಪಗಳು ಕೇಳಿಬರುತ್ತಿದ್ದರೂ ಅದರ ಬಗ್ಗೆ ಆ ಕ್ಷಣದಲ್ಲಿ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸುತ್ತಾರೆ. ಆದರೆ, ಔಷಧಿಯ ದಾಸ್ತಾನೇ ಇಲ್ಲದಿರುವಾಗ ಒಬ್ಬರ ಮೇಲೊಬ್ಬರು ಆರೋಪಗಳನ್ನು ಹೊರಿಸುವತ್ತ ನಿರತರಾಗುತ್ತಾರೆ.
ಇದರ ಲಾಭ ಪಡೆದು ಕೆಲವು ಔಷಧಿ ಕಂಪೆನಿಗಳ ಜತೆ ಶಾಮೀಲಾಗಿ ಸರಿಯಾದ ಟೆಂಡರ್ ಪ್ರಕ್ರಿಯೆಗಳನ್ನು ನಡೆಸದೆ ಕೋಟ್ಯಂತರ ರೂ.ಮೌಲ್ಯದ ಔಷಧಿಗಳನ್ನು ಖರೀದಿಸುವ ದಂಧೆಯಿಂದಾಗಿ ನಷ್ಟ ಉಂಟಾಗುವ ಹಲವಾರು ಉದಾಹರಣೆಗಳು ಸಿಗುತ್ತವೆ.
ಇದರ ನಡುವೆ ಈಗ ಔಷಧಿಗಳನ್ನು ಪೂರೈಸುವ ಹೊಣೆ ಹೊತ್ತಿರುವ ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ಆ್ಯಂಡ್ ವೇರ್‍ಹೌಸಿಂಗ್ ಸೊಸೈಟಿ (ಕೆಎಸ್‍ಡಿಎಲ್‍ಡಬ್ಲ್ಯೂಎಸ್) ಮಾಡಿರುವ ಎಡವಟ್ಟೊಂದು ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಈ ಸಂಸ್ಥೆ ಗುಣಮಟ್ಟದ ಔಷಧಿಗಳನ್ನು ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸಕಾಲದಲ್ಲಿ ಪೂರೈಸುವ ಜವಾಬ್ದಾರಿ ಹೊಂದಿದೆ.ಅದಕ್ಕಾಗಿ ಪ್ರತಿ ವರ್ಷ ಬ್ಯಾಂಡೇಜ್ ಕ್ಲಾತ್, ಕಾಟನ್, ಗ್ಲೂಕೋಸ್ ಬಾಟಲ್, ಚುಚ್ಚುಮದ್ದು ಸೇರಿ ವಿವಿಧ ಔಷಧಿಗಳನ್ನು ಪೂರೈಸುವ ಸಲುವಾಗಿ ಸರಿಸುಮಾರು 350 ಕೋಟಿ ರೂ.ಗಳ ಟೆಂಡರ್ ಕರೆಯಲಾಗುತ್ತದೆ.ಆದರೆ, ಇಲ್ಲಿಯವರೆಗೆ ನಡೆದ ಟೆಂಡರ್‍ನಲ್ಲಿ ಓಪನ್ ಟೆಂಡರ್ ಬದಲು ಕ್ಲೋಸಿಂಗ್ ಟೆಂಡರ್ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.
ಬಿಡ್‍ದಾರರು ಟೆಂಡರ್‍ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಆನ್‍ಲೈನ್ (ಇ-ಪೆÇೀರ್ಟಲ್) ಮೂಲಕ ಸಲ್ಲಿಸುತ್ತಾರೆ.ನಂತರ ಅಧಿಕಾರಿಗಳು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸರಿಯಾದ ದಾಖಲೆ ಸಲ್ಲಿಸಿರುವ ಬಿಡ್‍ದಾರರನ್ನು ನಿಯಮಾನುಸಾರ ತಾಂತ್ರಿಕ ಬಿಡ್‍ಗೆ ಪರಿಗಣಿಸಬೇಕು.ಆದರೆ, ಇದನ್ನು ಕ್ರಮಬದ್ಧವಾಗಿ ನಡೆಸದೆ ಕೆಲ ಕಂಪೆನಿಗಳಿಗೆ ತುರ್ತು ನೆಪ ಹೇಳಿ ಟೆಂಡರ್‍ಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಆರು ತಿಂಗಳಲ್ಲಿ 35 ಟೆಂಡರ್‍ಗಳ ಪೈಕಿ 12 ಟೆಂಡರ್‍ಗಳನ್ನು ಮಾತ್ರ ಅಂತಿಮಗೊಳಿಸಿ ಉಳಿದ ಟೆಂಡರ್‍ಗಳನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿದೆ ಮತ್ತು ಕೆಲವನ್ನು ರೀ ಟೆಂಡರ್ ಕರೆಯಲಾಗಿದೆ.ಇದರಿಂದಾಗಿ ಆಸ್ಪತ್ರೆಗಳಿಗೆ ಔಷಧಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.
ಓಪನ್ ಟೆಂಡರ್ ಎಂದರೇನು?ಓಪನ್ ಟೆಂಡರ್‍ನಲ್ಲಿ ಕಂಪೆನಿಗಳು ಸಲ್ಲಿಸುವ ಪ್ರತಿ ದಾಖಲೆಗಳನ್ನು ಬಿಡ್ ಸಲ್ಲಿಸಿರುವ ಇತರರು ಕೂಡ ನೋಡಬಹುದಾಗಿದೆ.ಒಂದು ವೇಳೆ ದಾಖಲೆ ಸರಿಯಿಲ್ಲದಿದ್ದಲ್ಲಿ ದೂರು ನೀಡುವ ಅವಕಾಶವಿರುತ್ತದೆ.
ಕ್ಲೋಸಿಂಗ್ ಟೆಂಡರ್ ಎಂದರೇನು?ಇಲ್ಲಿ ಕಂಪೆನಿಗಳು ಸಲ್ಲಿಸುವ ಪ್ರತಿ ದಾಖಲೆಯನ್ನೂ ಬೇರೊಬ್ಬ ಬಿಡ್‍ದಾರರು ನೋಡಲು ಸಾಧ್ಯವಾಗುವುದಿಲ್ಲ.
ಹಿಸ್ಟರಿಕಲ್ ಡಾಕ್ಯುಮೆಂಟ್ ದಂಧೆ: ಇಲ್ಲಿ ಅಧಿಕಾರಿಗಳ ಕೈ ಚಳಕ ಜೋರಾಗಿರುತ್ತದೆ.ಟೆಂಡರ್ ಸಲ್ಲಿಸುವ ಬಿಡ್‍ದಾರರನ್ನು ನೋಡಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಲು ಮಸಲತ್ತು ಶುರುವಾಗುತ್ತದೆ. ಅದಕ್ಕಾಗಿ ಬಳಸುವ ಉಪಾಯವೇ ಹಿಸ್ಟರಿಕಲ್ ಡಾಕ್ಯುಮೆಂಟ್ ನಿಯಮ.
ಇದರ ಪ್ರಕಾರ, ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ನಂತರವೂ ಮತ್ತೊಮ್ಮೆ ಇನ್ನಷ್ಟು ದಾಖಲೆಗಳನ್ನು ನೀಡುವಂತೆ ತಿಳಿಸಲಾಗುತ್ತದೆ.ಅವರಿಗೆ ಇದೆಲ್ಲ ಗೌಪ್ಯವಾಗಿರುತ್ತದೆ.ಆದರೆ, ಇದು ಅಧಿಕಾರಿ ವಲಯದಲ್ಲಿ ಚರ್ಚೆಗೆ ಬಂದು ಲಾಭ ಮಾಡಿಕೊಳ್ಳುತ್ತಾರೆ.
ಕೆಎಸ್‍ಡಿಎಲ್‍ಡಬ್ಲ್ಯೂಎಸ್‍ನಲ್ಲಿ ಪ್ರತಿ ವರ್ಷ ಔಷಧಿ ಮತ್ತು ಇತರೆ ಔಷಧಿಗಳು ಸೇರಿ ಒಟ್ಟು 350 ಕೋಟಿ ಮೌಲ್ಯದ ಟೆಂಡರ್ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದಿಂದ 150 ಕೋಟಿಗೂ ಹೆಚ್ಚು ಅನುದಾನ ಸಿಗುತ್ತದೆ. ಇದನ್ನು ಬಡ ರೋಗಿಗಳಿಗೆ ಬಳಸಿ ಎಂದು ತಿಳಿಸಲಾಗಿರುತ್ತದೆ.ಆದರೆ, ಅಧಿಕಾರಿ ವರ್ಗ ಇದನ್ನು ನಯವಾಗಿಯೇ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತದೆ.
ಬಿಲ್ ಬಾಕಿ: ಇದರ ನಡುವೆ ಕಳೆದ ಎರಡು ವರ್ಷಗಳಿಂದ ನಿಯಮಾನುಸಾರ ಔಷಧಿ ಪೂರೈಸಿದ ಸರಬರಾಜುದಾರರಿಗೆ ನೂರು ಕೋಟಿಗೂ ಹೆಚ್ಚು ಬಿಲ್‍ಗಳನ್ನು ನೀಡದೆ ಸತಾಯಿಸಲಾಗುತ್ತಿದೆ.40 ದಿನಗಳೊಳಗೆ ಬಾಕಿ ಪಾವತಿಸಬೇಕೆಂಬ ನಿಯಮವಿದ್ದರೂ ಅದರ ಬಗ್ಗೆ ತಲೆಯೇ ಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ನಮಗೆ ಇಂತಿಷ್ಟು ಮಾಮೂಲು ನೀಡಿದರೆ ಬೇಗ ಹಣ ಬಿಡುಗಡೆಯಾಗುತ್ತದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ವಿಷಯವಾರು ಟೆಂಡರ್‍ಮೊತ್ತ (ಕೋಟಿ ರೂ.ಗಳಲ್ಲಿ)
ಬ್ಯಾಂಡೇಜ್ ಕ್ಲಾತ್7 ಕೋಟಿ ರೂ.
ಕಾಟನ್5 ಕೋಟಿ ರೂ.
ಸರ್ಜಿಕಲ್ ಗ್ಲೌಸ್20 ಕೋಟಿ ರೂ.
ಗ್ಲೂಕೋಸ್ ಬಾಟಲ್ 30 ಕೋಟಿ ರೂ.
ಆಂಟಿಬಯೋಟಿಕ್ ಮಾತ್ರೆ100 ಕೋಟಿ ರೂ.
ನೋವು ನಿವಾರಕ, ಜ್ವರ ಮಾತ್ರೆ 30 ಕೋಟಿ ರೂ.
ಚುಚ್ಚುಮದ್ದು40 ಕೋಟಿ ರೂ.
ಸ್ವುಚ್ಛರ್ ವಸ್ತುಗಳು30 ಕೋಟಿ ರೂ.
ಡ್ರಿಪ್ಸ್‍ಸೆಟ್6 ಕೋಟಿ ರೂ.
ಸರ್ಜಿಕಲ್ ಐಟಮ್ಸ್30 ಕೋಟಿ ರೂ.
ವಿವಿಧ ಔಷಧಿಗಳು30 ಕೋಟಿ ರೂ.
ಟೆಸ್ಟಿಂಗ್ ಕಿಟ್ಸ್35 ಕೋಟಿ ರೂ
ಒಟ್ಟು363