ಬೆಂಗಳೂರು, ಜ.7-ಬಿಬಿಎಂಪಿಯ ಸ್ಥಾಯಿ ಸಮಿತಿ ಚುನಾವಣೆಗೆ ಮತ್ತೆ ಗ್ರಹಣ ಬಡಿಯುವ ಸಾಧ್ಯತೆಯೇ ಹೆಚ್ಚಾಗಿದೆ.
ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಂಗಿ ಕುಸ್ತಿ, ದೋಸ್ತಿಗಳ ನಡುವೆ ತಲೆದೋರುತ್ತಿರುವ ಭಿನ್ನಾಭಿಪ್ರಾಯದಿಂದ ಚುನಾವಣೆ ಅಯೋಮಯವಾಗುವ ಸಾಧ್ಯತೆ ಇದ್ದು, ಈ ಬಾರಿಯ ಬಜೆಟ್ನ್ನು ಮಹಾಪೌರರೇ ಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಗದಿಯಂತೆ ಜ.16ಕ್ಕೆ ಸ್ಥಾಯಿ ಸಮಿತಿ ಚುನಾವಣೆ ನಡೆಯಬೇಕಿತ್ತು.ಎಲ್ಲಾ ಸದಸ್ಯರಿಗೆ ಚುನಾವಣೆ ಸಂಬಂಧ ನೋಟಿಸ್ ರವಾನಿಸಬೇಕಿತ್ತು.ಆದರೆ ಆಡಳಿತ ಪಕ್ಷ ಕಾಂಗ್ರೆಸ್ ಎಂದು ಇಂದು ಬೆಳಗ್ಗೆ ಜ.11ರಂದು ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು ದಿಢೀರ್ ಘೋಷಣೆ ಮಾಡಿದೆ. ಇದನ್ನು ಪ್ರತಿಪಕ್ಷ ಬಿಜೆಪಿ ಸಾರಾಸಗಟಾಗಿ ವಿರೋಧಿಸಿದೆ.
ಯಾವುದೇ ಚುನಾವಣೆ ನಡೆಸುವಾಗ ಸದಸ್ಯರಿಗೆ 7 ದಿನಗಳ ಮುಂಚಿತವಾಗಿ ನೋಟೀಸ್ ನೀಡಬೇಕು. ನಾಲ್ಕು ದಿನ ಕಾಲಾವಕಾಶವಿಲ್ಲ. ದಿಢೀರ್ ಚುನಾವಣೆ ಘೋಷಣೆ ಮಾಡಿದರೆ ನಾವು ಒಪ್ಪುವುದಿಲ್ಲ. ಅಲ್ಲದೆ ನಮ್ಮ ಪಕ್ಷದ ಮುಖಂಡರೆಲ್ಲ ಚುನಾವಣಾ ಸಂದರ್ಭದಲ್ಲಿ ಇರುವುದಿಲ್ಲ. ನಿಮ್ಮ ನಿರ್ಧಾರ ಸರಿಯಿಲ್ಲ ಎಂದು ವಿರೋಧ ಪಕ್ಷದ ಸದಸ್ಯರು ಹರಿಹಾಯ್ದಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಆಡಳಿತ ಪಕ್ಷದ ಮುಖಂಡರು, ಸ್ಥಾಯಿ ಸಮಿತಿಗಳ ಚುನಾವಣೆಗೆ ಮುಖಂಡರ ಅಗತ್ಯವಿಲ್ಲ. ಸದಸ್ಯರು ಹಾಜರಿದ್ದರೆ ಸಾಕು ಎಂದಿದ್ದಾರೆ.
ಆದರೆ ಜ.11 ರಂದು ಬಿಜೆಪಿ ಸದಸ್ಯರು ಸ್ಥಾಯಿ ಸಮಿತಿ ಚುನಾವಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಚುನಾವಣೆ ಮೇಲೆ ಮತ್ತೊಮ್ಮೆ ಕಾರ್ವೋಡ ಕವಿದಿದೆ.
ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಅಧಿಸೂಚನೆ ಹೊರಬೀಳಲಿದ್ದು, ಫೆಬ್ರವರಿ 18ಕ್ಕೆ ರಾಜ್ಯ ಬಜೆಟ್ ಘೋಷಣೆಯಾಗಲಿದೆ. ಫೆಬ್ರವರಿಯಲ್ಲಿಯೇ ಕೇಂದ್ರ ಬಜೆಟ್ ಕೂಡ ಮಂಡನೆಯಾಗಲಿದೆ.ಬಿಬಿಎಂಪಿ ಬಜೆಟ್ ಕೂಡ ಮಂಡಿಸಬೇಕಿದೆ.ಇದಕ್ಕೆ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ನೇಮಕವಾಗಿದ್ದರೆ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈವರೆಗೂ ಯಾವುದೇ ಸ್ಥಾಯಿ ಸಮಿತಿಗಳಿಗೂ ನೇಮಕವಾಗಿಲ್ಲ.
ಸ್ಥಾಯಿ ಸಮಿತಿ ಚುನಾವಣೆಯ ಹಗ್ಗಾಜಗ್ಗಾಟ ಮುಂದುವರೆದಿರುವುದು ಗಮನಿಸಿದರೆ ಹಾಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರೇ ಬಜೆಟ್ ಮಂಡಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಬಿಬಿಎಂಪಿ ಬಿಜೆಪಿ ಆಡಳಿತಾವಧಿಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾದಾಗ ಅಂದಿನ ಮೇಯರ್ ವೆಂಕಟೇಶ್ಮೂರ್ತಿಯವರೇ ಬಜೆಟ್ ಮಂಡಿಸಿದ್ದರು.
ಬಹುತೇಕ ಇದೇ ಪರಿಸ್ಥಿತಿ ಪುನರಾವರ್ತನೆ ಆದರೂ ಆಗಬಹುದು ಎಂಬ ಮಾತುಗಳು ಪಾಲಿಕೆ ವಲಯದಲ್ಲಿ ಕೇಳಿ ಬರುತ್ತಿದೆ. ಅದಕ್ಕಾಗಿ ಆದಷ್ಟು ಬೇಗ ಸ್ಥಾಯಿ ಸಮಿತಿ ಚುನಾವಣೆ ನಡೆಸಬೇಕೆಂದು ಆಡಳಿತ ಪಕ್ಷದ ನಾಯಕರು ಚುರುಕಾಗಿದ್ದಾರೆ.
ಈ ನಡುವೆ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ದೊರೆತಿಲ್ಲ. ಎಸ್.ಟಿ.ಸೋಮಶೇಖರ್ ಅವರಿಗೆ ಬಿಡಿಎ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದರಿಂದಾಗಿ ಹಲವು ಸದಸ್ಯರು ಬೇಸರಗೊಂಡಿದ್ದಾರೆ.ಇವರ ಬೆಂಬಲಿತ ಹಲವು ಸದಸ್ಯರು ಸ್ಥಾಯಿ ಸಮಿತಿಯಲ್ಲಿದ್ದಾರೆ.
ಇವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ, ಸ್ಥಾಯಿ ಸಮಿತಿ ಚುನಾವಣೆಗೆ ಹಾಜರಾಗುತ್ತಾರೆಯೇ ಎಂಬ ಅನುಮಾನವೂ ಕೂಡ ಕಾಡತೊಡಗಿದೆ.ಚುನಾವಣೆಗೆ ಹಾಜರಾಗುವಂತೆ ಪಕ್ಷ ವಿಪ್ ನೀಡುವ ಸಾಧ್ಯತೆ ಇದೆ.ಆದರೆ ಸ್ಥಾಯಿ ಸಮಿತಿ ಸದಸ್ಯರಾಗಿರುವ ಪ್ರತಿಪಕ್ಷ ಬಿಜೆಪಿ ಸದಸ್ಯರು ಗೈರು ಹಾಜರಾದರೆ ಚುನಾವಣೆ ನಡೆಯುವ ಸಾಧ್ಯತೆ ಕ್ಷೀಣ. ಹಾಗಾಗಿ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಮೇಲೆ ಕಾರ್ಮೋಡ ಕವಿದಂತಾಗಿದೆ.
ನಿಗದಿತ ಅವಧಿಗೆ ಚುನಾವಣೆ ನಡೆಯಲಿದೆಯೇ…? ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ನೇಮಕವಾಗಲಿದೆಯೇ ಅಥವಾ ಹಗ್ಗಜಗ್ಗಾಟ ಮುಂದುವರೆದು ಮೇಯರ್ ಅವರೇ ಬಜೆಟ್ ಮಂಡನೆ ಮಾಡುವ ಪರಿಸ್ಥಿತಿ ಎದುರಾಗಲಿದೆಯೇ ಕಾದುನೋಡಬೇಕು.