ಬೆಂಗಳೂರು, ಜ.7- ಕಳೆದ ಕೆಲ ದಿನಗಳಿಂದ ಬೆಂಗಳೂರು ಒನ್ ಕೇಂದ್ರಗಳಲ್ಲಿ ಕೊಳೆಯುತ್ತಿದ್ದ ಸುಮಾರು 17.5 ಕೋಟಿ ರೂ.ಹಣ ಪಾಲಿಕೆ ಬೊಕ್ಕಸಕ್ಕೆ ಹಿಂದಿರುಗಿದೆ.
ಬೆಂಗಳೂರು ಒನ್ ಕೇಂದ್ರಗಳಲ್ಲಿ ಬಿಬಿಎಂಪಿಗೆ ಸಂಬಂಧಿಸಿದ ಖಾತಾ ವಿಂಗಡಣೆ, ವಿಸ್ತರಣೆ ಸೇರಿದಂತೆ ಮತ್ತಿತರ ಕೆಲಸಗಳಿಗೆ ಸಾರ್ವಜನಿಕರಿಂದ ಶುಲ್ಕ ಕಟ್ಟಿಸಿಕೊಂಡು ಕೆಲಸಗಳನ್ನು ಮಾಡಿಕೊಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
ಇಲ್ಲಿ ಸಾರ್ವಜನಿಕರಿಂದ ಸಂಗ್ರಹವಾದ ಹಣದಲ್ಲಿ ಕಮಿಷನ್ ಹೊರತುಪಡಿಸಿ ಉಳಿದ ಹಣವನ್ನು ಪಾಲಿಕೆ ಖಾತೆಗೆ ವರ್ಗಾವಣೆ ಮಾಡಬೇಕಾಗಿತ್ತು. ಆದರೆ, ಪಾಲಿಕೆಯ ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲ ದಿನಗಳಿಂದ ಬೆಂಗಳೂರು ಒನ್ ಕೇಂದ್ರಗಳಲ್ಲಿ ಕೋಟಿ ಕೋಟಿ ಹಣ ಕೊಳೆಯುತ್ತ ಬಿದ್ದಿತ್ತು. ಇದನ್ನು ಯಾರೂ ಸಹ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಬೆಂಗಳೂರು ಒನ್ ಕೇಂದ್ರಗಳಲ್ಲಿ ಹಣ ಇರುವುದರ ಬಗ್ಗೆ ಮಾಹಿತಿ ಕಲೆ ಹಾಕಿದ ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಸಾರ್ವಜನಿಕರಿಂದ ಸಂಗ್ರಹವಾದ ಹಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ತರಾಟೆಗೆ ತೆಗೆದುಕೊಂಡಿದ್ದರು.ಬರೀ ಐದಾರು ಕೋಟಿ ಹಣ ಬರಬಹುದೆಂದು ಅಂದಾಜಿಸಲಾಗಿತ್ತು.ಪದ್ಮನಾಭರೆಡ್ಡಿ ಅವರು ಪತ್ರ ಬರೆಯುತ್ತಿದ್ದ ಹಾಗೆ 17.5 ಕೋಟಿ ರೂ.ಹಣ ಪಾಲಿಕೆ ಬೊಕ್ಕಸಕ್ಕೆ ಹಿಂದಿರುಗಿದೆ.
ಇದನ್ನು ಪದ್ಮನಾಭರೆಡ್ಡಿ ಅವರು ಗಮನಿಸದಿದ್ದರೆ ಕೇಂದ್ರಗಳಲ್ಲೇ ಹಣ ಕೊಳೆಯುತ್ತಿತ್ತು.ಈ ರೀತಿ ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ ಹಣವನ್ನು ಕ್ರೋಢೀಕರಿಸಿ ಪಾಲಿಕೆ ಖಾತೆಗೆ ವರ್ಗಾವಣೆ ಮಾಡಿದರೆ ಬೆಂಗಳೂರು ಅಭಿವೃದ್ಧಿಗೆ ನೆರವಾಗಲಿದೆ.