ಬೆಂಗಳೂರು, ಜ.6- ಮಲೆನಾಡು ಮಿತ್ರವೃಂದವು ಪ್ರತಿ ವರ್ಷ ಜನವರಿ ತಿಂಗಳ ಮೊದಲ ವಾರದಲ್ಲಿ ಮಲೆನಾಡಿಗರಿಗಾಗಿ ಆಯೋಜಿಸುವ ಮಲೆನಾಡು ಕ್ರೀಡಾಕೂಟದಲ್ಲಿ ನಗರದಲ್ಲಿ ನೆಲೆಸಿರುವ ಮಲೆನಾಡಿಗರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.
ಮಲೆನಾಡಿನ ಹೆಮ್ಮೆಯ ತಿನಿಸು ಕಡುಬು ತಿನ್ನುವ ಸ್ಪರ್ಧೆ ವಿಶೇಷವಾಗಿತ್ತು. ಮಹಿಳೆಯರಿಗೆ ಮೂರು ನಿಮಿಷದಲ್ಲಿ ಅತಿ ಹೆಚ್ಚು ಕಡುಬು ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಅದೇ ರೀತಿ ಐದು ನಿಮಿಷದಲ್ಲಿ ಅತಿ ಹೆಚ್ಚು ಕಡುಬು ತಿನ್ನುವ ಸ್ಪರ್ಧೆಯನ್ನು ಪುರುಷರಿಗೆ ಆಯೋಜಿಸಲಾಗಿತ್ತು.
ಜಾಲಹಳ್ಳಿಯ ಎಚ್ಎಂಟಿ ಕ್ರೀಡಾಂಗಣದಲ್ಲಿ ಕ್ರೀಡಾಕೂಟಗಳು ನಡೆದವು. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.
ಮಲೆನಾಡು ಭಾಗಗಳಿಂದ ಬಂದು ಬೆಂಗಳೂರಿನಲ್ಲಿ ಉದ್ಯೋಗ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುವ ನಾವುಗಳು ಬಿಡುವಿನ ವೇಳೆಯಲ್ಲಿ ಒಂದೆಡೆ ಸೇರಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಈ ವೇಳೆ ಮಲೆನಾಡಿನ ಮಹಿಳೆಯರು ಸಂಭ್ರಮದಿಂದ ಹೇಳಿಕೊಂಡರು.
ಕ್ರೀಡಾಕೂಟದ ಸಂದರ್ಭದಲ್ಲಿ ಮಲೆನಾಡಿನ ಚಿತ್ರಣಗಳಿರುವ 2019ರ ಕ್ಯಾಲೆಂಡರ್ಗಳನ್ನು ವಿತರಿಸಲಾಯಿತು.
ಮಲೆನಾಡು ಮಿತ್ರವೃಂದದ ಅಧ್ಯಕ್ಷ ಸುಬ್ಬಯ್ಯ ನಂಟೂರು, ಕಾರ್ಯದರ್ಶಿ ವಾಸಪ್ಪ ಪಡುಬೈಲ್ ಮತ್ತಿತರರು ಕ್ರೀಡಾ ಕೂಟದ ನೇತೃತ್ವ ವಹಿಸಿದ್ದರು.