ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಇಬ್ಬರು ಮಹಿಳೆಯರು ಪ್ರವೇಶಿಸಿದ ನಂತರ ದೇವರನಾಡು ಕೇರಳದಲ್ಲಿ ಪ್ರತಿಭಟನೆ ಮುಂದುವರಿದಿದೆ. ಕಣ್ಣೂರು ರಣರಂಗವಾಗಿದ್ದು, ಎಡಪಕ್ಷಗಳು ಮತ್ತು ಸಂಘ ಪರಿವಾರದ ಕಾರ್ಯಕರ್ತರ ನಡುವೆ ಮತ್ತೆ ಘರ್ಷಣೆ ಮತ್ತು ಹಿಂಸಾಚಾರ ಭುಗಿಲೆದ್ದಿದೆ.
ಸಿಪಿಎಂ ಮತ್ತು ಬಿಜೆಪಿ ಮುಖಂಡರ ಮನೆಗಳ ಮೇಲೆ ನಡೆದ ಬಾಂಬ್ ದಾಳಿಗಳು ನಿನ್ನೆ ರಾತ್ರಿಯೂ ಸಹ ಮುಂದುವರೆದಿದೆ. ಕಣ್ಣೂರು ಜಿಲ್ಲೆಯ ಹಿಂಸಾಚಾರಪೀಡಿತ ತಲಸ್ಸೇರಿ ಸೇರಿದಂತೆ ಮತ್ತಿತರ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯ ಭದ್ರಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಶಿವವಿಕ್ರಮ್ ತಿಳಿಸಿದ್ಧಾರೆ.
ಹಿಂಸಾಚಾರ ಭುಗಿಲೆದ್ದಿರುವ ಪ್ರದೇಶಗಳಲ್ಲಿ ಶಾಂತಿ ಕಾಪಾಡುವಂತೆ ಜಿಲ್ಲಾಧಿಕಾರಿ ಮಿರ್ ಮೊಹವiದ್ ಅಲಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ. ಪೊಲೀಸ್ ಪಹರೆ ನಡುವೆಯೂ ಕಣ್ಣೂರು ಜಿಲ್ಲೆಯ ವಿವಿಧೆಡೆ ಹಿಂಸಾಚಾರ ಮುಂದುವರಿದಿದೆ. ದುಷ್ಕರ್ಮಿಗಳು ಚೆರುತಾಚಾಮ್ ಪ್ರದೇಶದ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪಪ್ಪಿನಿಸೆರಿಯಾದಲ್ಲಿರುವ ಬಿಜೆಪಿ ನಾಯಕರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಅವರ ಮನೆಗಳ ಮೇಲೆ ಕಲ್ಲು ತೂರಿ ಕಿಟಕಿ ಗಾಜುಗಳನ್ನು ಪುಡಿ ಮಾಡಲಾಗಿದೆ.
ಕಳೆದ ಎರಡು ದಿನಗಳಿಂದ ಕಣ್ಣೂರು ಜಿಲ್ಲೆಯೊಂದರಲ್ಲೇ ಉಲ್ಬಣಗೊಂಡ ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಪೊಲೀಸರು 150ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡು, 350ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದಾರೆ. ರಾಜಕೀಯ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ ಪಕ್ಷದ ಕಚೇರಿಗಳಿಗೆ ಬೆಂಕಿ ಹಚ್ಚಿರುವವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲೋಕನಾಥ್ ಬೆಹರಾ ಕಣ್ಣೂರು ಪೊಲೀಸ್ ವರಿಷ್ಠರಿಗೆ ಸೂಚನೆ ನೀಡಿದ್ದಾರೆ.
ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ರಣರಂಗ ಎಂದೇ ಪರಿಗಣಿಸಲ್ಪಟ್ಟಿದ್ದ ಕಣ್ಣೂರು ಕಳೆದ ಒಂದು ವರ್ಷದಿಂದ ಶಾಂತವಾಗಿತ್ತು. ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿಗೆ ಇಬ್ಬರು ಮಹಿಳೆಯರು ಪ್ರವೇಶಿಸಿ ದರ್ಶನ ಪಡೆದ ನಂತರ ಕೇರಳದಲ್ಲಿ ಅದರಲ್ಲೂ ಕಣ್ಣೂರಿನಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.