ಚಿಂತಾಮಣಿಯಿಂದ ಪೆರುಮಾಚನಹಳ್ಳಿ ಮಾರ್ಗವಾಗಿ ವೆಂಕಟಾಪುರ ಮತಿತ್ತರ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರು ಕಿತ್ತು ಬಂದು, ಸುಮಾರು ಹನ್ನೆರಡು ವರ್ಷಗಳಿಗೂ ಹೆಚ್ಚುಕಾಲವಾಗಿದ್ದು, ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ವೆಂಕಟಾಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಚಿಂತಾಮಣಿ ತಾಲೂಕು ಕೈವಾರ ಹೊಬಳಿಯ ಪೆರುಮಾಚನಹಳ್ಳಿಯಿಂದ ವೆಂಕಟಾಪುರ ಗ್ರಾಮದವರೆಗಿನ ಒಂದೂವರೇ ಕೀ.ಮೀ ರಸ್ತೆಗೆ ಡಾಂಬರೀಕರಣ ಮಾಡಿ ಹದಿನೈದು ವರ್ಷಗಳಿಗೂ ಹೆಚ್ಚಿನ ಕಾಲವಾಗಿದೆ. ಅಂದಿನ ವೇಮಗಲ್ ಕ್ಷೇತ್ರದ ಶಾಸಕರು ಹಾಗೂ ಮಾಜಿ ಕೃಷಿ ಸಚಿವ ದಿವಗಂತ ಬೈರೇಗೌಡರು ಈ ರಸ್ತೆಗೆ ಡಾಂಬರೀಕರಣ ಮಾಡಿಸಿರುವುದು ಬಿಟ್ಟರೇ, ಇದುವರೆಗೂ ಬಂದ ಎಲ್ಲಾ ಜನಪ್ರತಿನಿದಿಗಳು ಈ ರಸ್ತೆ ದುರಸ್ತಿಗೊಳಿಸುವ ಬಗ್ಗೆ ಯಾವುದೇ ರೀತಿಯಾಗಿ ತಲೆ ಕೆಡಿಸಿಕೊಂಡಿಲ್ಲ.
ಚಿಂತಾಮಣಿ ನಗರದಿಂದ ಪೆರುಮಾಚನಹಳ್ಳಿ ಮಾರ್ಗವಾಗಿ ವೆಂಕಟಾಪುರ, ನಾಯಿಂದ್ರಹಳ್ಳಿ ಕಾಲೋನಿ ಮತ್ತಿತರ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಮದ್ಯೆ ಡಾಂಬರು ಕಿತ್ತು ಬಂದು, ರಸ್ತೆಯ ತುಂಬೆಲ್ಲಾ ದೊಡ್ಡ ದೊಡ್ಡ ಹಳ್ಳ ಕೊಳ್ಳಗಳು ಬಿದ್ದಿವೆ. ಈಗಾಗಲೇ ಆನೇಕ ಬಾರಿ ಈ ರಸ್ತೆಯಲ್ಲಿ ಜನರು ಗಾಡಿಗಳಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಪ್ರತಿನಿತ್ಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೆಲಸದ ನಿಮಿತ್ತ ಚಿಂತಾಮಣಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇದೇ ರಸ್ತೆಯ ಮುಖಾಂತರ ಬಂದು ಹೋಗುತ್ತಿದ್ದು, ರಸ್ತೆಯ ಡಾಂಬರು ಕಿತ್ತುಹೋಗಿ ಜೆಲ್ಲಿ ಕಲ್ಲುಗಳು ಮೇಲೆದ್ದಿರುವ ಪರಿಣಾಮ ಈ ರಸ್ತೆಯಲ್ಲಿ ಪ್ರಯಾಣ ಮಾಡಬೇಕಾದರೆ ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಸಂಚಾರ ಮಾಡಬೇಕಾಗಿದೆ.
ಹದಗೆಟ್ಟಿರುವ ವೆಂಕಟಾಪುರ ಮಾರ್ಗದ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆನೇಕ ಬಾರಿ ಸಂಬಂದ ಪಟ್ಟ ಅದಿಕಾರಿಗಳಿಗೆ, ಜನಪ್ರತಿನಿದಿಗಳಿಗೆ ಮನವಿಯನ್ನು ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಮುಂದುವರೆದರೆ ಸಂಬಂದಪಟ್ಟ ಕಛೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ವೆಂಕಟಾಪುರ ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನಾದರೂ ಸಂಬಂದಪಟ್ಟ ಅದಿಕಾರಿಗಳಾಗಲಿ, ಜನಪ್ರತಿನಿದಿಗಳಾಗಲಿ ಇತ್ತ ಕಡೆ ಗಮನ ಹರಿಸಿ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುತಾರ ಅನ್ನೋದನ್ನ ಕಾದುನೋಡಬೇಕಾಗಿದೆ.