ದೇವರನಾಡು ಕೇರಳದಲ್ಲಿ ಸಂಘ ಪರಿವಾರ ಮತ್ತು ಎಡಪಕ್ಷಗಳ ನಡುವೆ ಘರ್ಷಣೆ-ಹಿಂಸಾಚಾರ

ತಿರುವನಂತಪುರಂ/ಕಣ್ಣೂರು, ಜ.5 (ಪಿಟಿಐ)- ದೇವರನಾಡು ಕೇರಳದಲ್ಲಿ ಸಂಘ ಪರಿವಾರ ಮತ್ತು ಎಡಪಕ್ಷಗಳ ನಡುವೆ ಘರ್ಷಣೆ-ಹಿಂಸಾಚಾರ ಭುಗಿಲೆದ್ದಿದೆ. ನಿನ್ನೆ ರಾತ್ರಿ ಥಲಸ್ಸೆರಿಯ ಬಿಜೆಪಿ ಸಂಸದ ವಿ.ಮುರಳೀಧರನ್ ಹಾಗೂ ಶಾಸಕ ಮತ್ತು ಸಿಪಿಎಂ ನಾಯಕ ಎ.ಎನ್.ಶಂಶೀರ್ ಸೇರಿದಂತೆ ಪಕ್ಷದ ಇತರ ಮುಖಂಡರ ಮನೆಗಳ ಮೇಲೆ ದುಷ್ಕರ್ಮಿಗಳು ನಿನ್ನೆ ರಾತ್ರಿ ಬಾಂಬ್‍ಗಳನ್ನು ಎಸೆದಿದ್ದಾರೆ.

ಈ ಕೃತ್ಯಗಳಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಸಂಸದರು, ಶಾಸಕರು ಮತ್ತು ನಾಯಕರು ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ನಂತರ ಹಲೆವೆಡೆ ಹಿಂಸೆ ನಡೆದ ಬಗ್ಗೆ ವರದಿಯಾಗಿದೆ.

ಕಣ್ಣೂರು ಮತ್ತು ಇತರ ಕಡೆಗಳಲ್ಲಿ ನಡೆದ ಬಾಂಬ್ ದಾಳಿಗಳು ಮತ್ತು ಇತರ ಹಿಂಸಾಚಾರ ಪ್ರಕರಣಗಳ ಸಂಬಂಧ ಕೇರಳ ಪೊಲೀಸರು 20ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಈ ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ.

ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ಥಲಸ್ಸೆರಿಯಲ್ಲಿರುವ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ವಿ.ಮುರಳೀಧರನ್ ಅವರ ಪೂರ್ವಜರ ಮನೆ ಮೇಲೆ ನಿನ್ನೆ ಮಧ್ಯರಾತ್ರಿ ದುಷ್ಕರ್ಮಿಗಳು ಬಾಂಬ್ ಎಸೆದು ಪರಾರಿಯಾದರು.

ಈ ಘಟನೆ ನಡೆದಾಗ ಸಂಸದರ ಸಹೋದರಿ ಅವರ ಭಾವ ಮತ್ತು ಮಕ್ಕಳು ಮನೆಯಲ್ಲಿದ್ದರು. ಅದೃಷ್ಟವಶಾತ್ ಅವರಿಗೆ ಗಾಯಗಳಾಗಿಲ್ಲ. ಇದು ಸಿಪಿಎಂ ಕಾರ್ಯಕರ್ತರ ಕೃತ್ಯ ಎಂದು ಪ್ರಸ್ತುತ ಆಂಧ್ರ ಪ್ರದೇಶದಲ್ಲಿರುವ ವಿ.ಮುರಳೀಧರನ್ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕರ ಮನೆ ಮೇಲೆ ಬಾಂಬ್ ದಾಳಿ: ಥಲಸ್ಸೆರಿ ಬಳಿ ಮಡಪೀಡಿಕಾಯಿಲ್ ಪ್ರದೇಶದಲ್ಲಿ ನಿನ್ನೆ ರಾತ್ರಿ 10.25ರಲ್ಲಿ ಬೈಕ್ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ಶಾಸಕ ಶಂಶೀರ್ ಅವರ ಮನೆ ಮೇಲೆ ಬಾಂಬ್ ಎಸೆದು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಹಿಂಸಾಚಾರ ಭುಗಿಲೆಳುವಂತೆ ಮಾಡಲು ಇದು ಆರ್‍ಎಸ್‍ಎಸ್ ನಡೆಸುತ್ತಿರುವ ಪಿತೂರಿಯಾಗಿದೆ. ಹಿಂಸಾಚಾರಗಳನ್ನು ನಡೆಸಿ ರಾಜ್ಯದಲ್ಲಿನ ಶಾಂತಿಯುತ ವಾತಾವರಣ ಕದಡುವುದು ಇದರ ಉದ್ದೇಶವಾಗಿದೆ ಎಂದು ಶಾಸಕ ಶಂಶೀರ್ ಆರೋಪಿಸಿದ್ದಾರೆ.

ಇದೇ ಜಿಲ್ಲೆಯ ಥಲಸ್ಸೆರಿಯ ಸಿಪಿಎಂ ನಾಯಕ ಪಿ.ಶಶಿ ಮತ್ತು ಇರಿಟ್ಟಿಯಲ್ಲಿರುವ ಪಕ್ಷದ ಕಾರ್ಯಕರ್ತ ವಿಶಾಖ್ ಅವರ ಮನೆಗಳ ಮೇಲೂ ಸಹ ದುಷ್ಕರ್ಮಿಗಳು ಬಾಂಬ್‍ಗಳನ್ನು ಎಸೆದಿದ್ದಾರೆ. ಅಡೂರ್ ಜಿಲ್ಲೆಯ ಸಿಪಿಎಂ ಸ್ಥಳೀಯ ನಾಯಕ ರೊಬ್ಬ ಎರಡು ಅಂಗಡಿಗಳು ಮತ್ತು ಮನೆಗಳ ಮೇಲೂ ನಿನ್ನೆ ರಾತ್ರಿ ಬಾಂಬ್ ದಾಳಿಗಳು ನಡೆದಿವೆ.

ಈ ಮಧ್ಯೆ, ಪಟ್ಟಣಂತಿಟ್ಟ ಜಿಲ್ಲೆಯ ಪದಂಳಂ, ಅಡೂರು ಮತ್ತು ಕೊಡುಮೊನ್ ಪೆÇಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಏಳು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಮಧ್ಯೆ ಕಣ್ಣೂರಿನ ಪೆರಿಯಾರಂನಲ್ಲಿ ಇಂದು ಮುಂಜಾನೆ ಕೆಲವು ದುಷ್ಕರ್ಮಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‍ಎಸ್) ಶಾಖಾ ಕಾರ್ಯಾಲಯಕ್ಕೆ ಬೆಂಕಿ ಹಚ್ಚಿರುವ ಘಟನೆಯೂ ನಡೆದಿದೆ.

ಶಬರಿಮಲೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿಗೆ ಇಬ್ಬರು ಮಹಿಳೆಯರು ಪ್ರವೇಶಿಸಿ ದರ್ಶನ ಪಡೆದ ನಂತರ ಕೇರಳದಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಕೇರಳ ಹಿಂಸಾಚಾರ; 1,400ಕ್ಕೂ ಹೆಚ್ಚು ಜನರ ಬಂಧನ: ವಿಶ್ವವಿಖ್ಯಾತ ಶಬರಿಮಲೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿಗೆ ಇಬ್ಬರು ಮಹಿಳೆಯರು ಪ್ರವೇಶಿಸಿ ದರ್ಶನ ಪಡೆದ ನಂತರ ಕೇರಳದಲ್ಲಿ ಭುಗಿಲೆದ್ದ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಈವರೆಗೆ 1,400ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಕನಕದುರ್ಗಾ ಮತ್ತು ಬಿಂದು ಎಂಬ ಮಹಿಳೆಯರ ದೇವಾಲಯ ಭೇಟಿ ಖಂಡಿಸಿ ಬಿಜೆಪಿ, ಆರ್‍ಎಸ್‍ಎಸ್ ಮತ್ತು ವಿವಿಧ ಹಿಂದು ಸಂಘಟನೆಗಳು ಕರೆ ನೀಡಿದ್ದ ಕೇರಳ ಬಂದ್ ವೇಳೆ ಭುಗಿಲೆದ್ದ ಹಿಂಸಾಚಾರ ಸಂಬಂಧ 801 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಪಂದಳಂನಲ್ಲಿ ಬಿಜೆಪಿ ಮತ್ತು ಎಡಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಚಂದ್ರನ್ ಉನ್ನಿತ್ತನ್(55) ಎಂಬುವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದರು. ಈ ಪ್ರಕರಣದ ಸಂಬಂಧ ಸಿಪಿಎಂ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ನಿನ್ನೆ ಶ್ರೀಲಂಕಾ ಮೂಲದ ಮಹಿಳೆಯೊಬ್ಬರು ಶ್ರೀ ಅಯ್ಯಪ್ಪ ಸನ್ನಿಧಿಗೆ ಭೇಟಿ ನೀಡಲು ವಿಫಲ ಯತ್ನ ನಡೆಸಿದ್ದರು. ವಿದೇಶಿಯರೂ ಸೇರಿದಂತೆ ಇನ್ನೂ ಕೆಲವು ಮಹಿಳೆಯರೂ ಸಹ ದೇವಸ್ಥಾನಕ್ಕೆ ತೆರಳಲು ಸಜ್ಜಾಗುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಶಬರಿ ಮಲೆನಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ