ನವದೆಹಲಿ, ಜ.5-ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಸಹಸ್ರಾರು ಕೋಟಿ ರೂ. ಸಾಲ ಪಡೆದು ವಂಚಿಸಿ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ವಿರುದ್ಧ ಕಾನೂನು ಕುಣಿಕೆ ಬಿಗಿಯಾಗುತ್ತಿದೆ.
8,100 ಕೋಟಿ ರೂ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಔಷಧಿ ತಯಾರಿಕಾ ಸಂಸ್ಥೆ ಸ್ಟರ್ಲಿಂಗ್ ಬಯೋ ಟೆಕ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರ ವಿರುದ್ಧ ದೆಹಲಿಯ ನ್ಯಾಯಾಲಯವೊಂದು ಇಂದು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
ಸಂಸ್ಥೆಯ ನಿರ್ದೇಶಕರಾದ ನಿತಿನ್ ಜಯಂತಿಲಾಲ್ ಸಂದೇಸರಾ, ಚೇತನ್ಕುಮಾರ್ ಜಯಂತಿಲಾಲ್ ಸಂದೇಸರಾ, ದೀಪ್ತಿ ಚೇತನ್ಕುಮಾರ್ ಹಾಗೂ ಹಿತೇಶ್ಕುಮಾರ್ ನರೇಂದ್ರಬಾಯಿ ಪಟೇಲ್ ವಿರುದ್ಧ ದೆಹಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸತೀಶ್ಕುಮಾರ್ ಅರೋರಾ ಎನ್ಬಿಡಬ್ಲ್ಯುಗಳನ್ನು ಜಾರಿಗೊಳಿಸಿದರು.
ಸಂಸ್ಥೆಯ ನಿರ್ದೇಶಕರ ವಿರುದ್ಧ ಕ್ರಮಕೈಗೊಳ್ಳಲು ಜಾಮೀನು ರಹಿತ ವಾರೆಂಟ್ ಹೊರಡಿಸುವಂತೆ ಜಾರಿ ನಿರ್ದೇಶನಾಲಯ (ಇಡಿ)ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಈ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ನಾಲ್ವರು ನಿರ್ದೇಶಕರ ವಿರುದ್ಧ ವಾರೆಂಟ್ ಹೊರಡಿಸಿದ್ದು, ತಪ್ಪಿತಸ್ಥರ ಕುತ್ತಿಗೆಗೆ ಸುತ್ತಿಕೊಂಡಿರುವ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗುತ್ತಿದೆ.