ನವದೆಹಲಿ, ಜ.5- ಫ್ರಾನ್ಸ್ನೊಂದಿಗೆ ರಫೇಲ್ ಫೈಟರ್ ಜೆಟ್ ಒಪ್ಪಂದ ಕುರಿತಂತೆ ತಾವು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಯನ್ನೇ ಪ್ರತಿಯೊಬ್ಬ ಭಾರತೀಯರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸಚಿವರುಗಳಿಗೆ ಕೇಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಮನವಿ ಮಾಡಿದ್ದಾರೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ನಲ್ಲಿ 2 ಗಂಟೆಗಳ ಕಾಲ ಮಾತನಾಡಿದರು. ಆದರೆ, ನಾನು ಕೇಳಿದ ಎರಡೇ ಎರಡು ಸರಳ ಪ್ರಶ್ನೆಗಳಿಗೆ ಅವರು ಉತ್ತರ ನೀಡಲಿಲ್ಲ ಎಂದು ರಾಹುಲ್ ಟ್ವೀಟರ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ನಲ್ಲಿ ತಾವು ಕೇಂದ್ರ ಸರ್ಕಾರ ಮತ್ತು ರಕ್ಷಣಾ ಸಚಿವರಿಗೆ ಕೇಳಿದ ಎರಡು ಪ್ರಶ್ನೆಗಳನ್ನು ಅವರು ವಿಡಿಯೋದಲ್ಲಿ ಪೋಸ್ಟ್ ಮಾಡಿದ್ದಾರೆ.
ಅನಿಲ್ ಅಂಬಾನಿಗೆ ಸಹಭಾಗಿತ್ವ ಗುತ್ತಿಗೆ ನೀಡಿದವರು ಯಾರು? ಹಾಗೂ ಈ ಒಪ್ಪಂದಕ್ಕಾಗಿ ಪ್ರಧಾನಮಂತ್ರಿಯವರು ಬೈಪಾಸ್ ಸರ್ಜರಿ (ಅನ್ಯಮಾರ್ಗ) ನಡೆಸಿದಾಗ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರೆ ಈ ಎರಡೂ ಪ್ರಶ್ನೆಗಳಿಗೆ ರಕ್ಷಣಾ ಸಚಿವರು ಹೌದು ಅಥವಾ ಇಲ್ಲ ಎಂದು ಉತ್ತರಿಸುವಂತೆ ರಾಹುಲ್ ಸಂಸತ್ನಲ್ಲಿ ಆಗ್ರಹಿಸಿದ್ದರು.
ಈ ಎರಡೂ ಪ್ರಶ್ನೆಗಳನ್ನು ದೇಶದ ಪ್ರತಿಯೊಬ್ಬರೂ ಪ್ರಧಾನಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ಕೇಳುವಂತೆ ರಾಹುಲ್ ರಾಷ್ಟ್ರದ ಜನತೆಗೆ ಮನವಿ ಮಾಡಿದ್ದಾರೆ.