
ಬೆಂಗಳೂರು,ಜ.5- ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕ ಭ್ರಷ್ಟಾಚಾರ ಆರೋಪದಲ್ಲಿ ಹಣದ ಸಮೇತ ಸಿಕ್ಕಿಬಿದ್ದಿರುವುದರಿಂದ ತಕ್ಷಣವೇ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಕ್ಷಣವೇ ಪುಟ್ಟರಂಗಶೆಟ್ಟಿ ಅವರಿಂದ ರಾಜೀನಾಮೆ ಪಡೆಯಬೇಕು.ತನಿಖೆಯ ಕುಂಟು ನೆಪ ಹೇಳಿ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾದರೆ ನಾಳೆಯಿಂದ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ವಿಧಾನಪರಿತ್ ಸದಸ್ಯ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಎಚ್ಚರಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕ ಮೋಹನ್ 25 ಲಕ್ಷ ನಗದು ಸಮೇತ ಪೆÇಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದು ಸಚಿವರಿಗೆ ಕೊಡಬೇಕೆಂದು ಕವರ್ನಲ್ಲಿ ಬರೆಯಲಾಗಿತ್ತು. ಭ್ರಷ್ಟಾಚಾರ ನಡೆಸಿರುವುದು ಸಾಬೀತಾಗಿರುವುದರಿಂದ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ.ಕೇವಲ ಒಂದು ದಿನದ ಕಲೆಕ್ಷನ್ 25 ಲಕ್ಷವಾದರೆ ಉಳಿದ ದಿನದ ಕಲೆಕ್ಷನ್ ಎಷ್ಟಾಗಬಹುದೆಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಾದ ಮೇಲೆ ಈವರೆಗೂ ಎಷ್ಟು ಕಲೆಕ್ಷನ್ ಆಗಿರಬಹುದು. ವಿಧಾನಸೌಧದಲ್ಲೇ ಸಚಿವರ ಆಪ್ತರು ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಾರೆಂದರೆ ಸರ್ಕಾರ ಎಷ್ಟರಮಟ್ಟಿಗೆ ಪಾರದರ್ಶಕವಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪ ಮಾಡುತ್ತಲೇ ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ತಮ್ಮ ಪಕ್ಷದ ಸಚಿವರ ಆಪ್ತನೇ ಹಣದ ಸಮೇತ ಸಿಕ್ಕಿಬಿದ್ದಿರುವುದರಿಂದ ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ವಿರುದ್ಧ ಕಳಕಳಿ ಇದ್ದರೆ ಪ್ರಕರಣ ನಡೆದು 24 ಗಂಟೆಯೊಳಗೆ ಸಚಿವರಿಂದ ರಾಜೀನಾಮೆ ಪಡೆಯಬೇಕಿತ್ತು. ಆದರೆ ಇನ್ನು ಇಲ್ಲಸಲ್ಲದ ಆರೋಪಗಳನ್ನು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಜನತೆಗೆ ಹೊರೆ:
ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಜನತೆಗೆ ಬರೆ ಹಾಕಿದೆ.ಮೊದಲೇ ಭೀಕರ ಬರಗಾಲದಿಂದ ತತ್ತರಿಸಿದ ಜನತೆಗೆ ದರ ಪರಿಷ್ಕರಣೆಯಿಂದ ಭಾರೀ ಹೊಡೆತ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ದರ ಏರಿಕೆಯಾದಾಗ ಕಾಂಗ್ರೆಸ್ ನಾಯಕರು ಪ್ರತಿ ದಿನ ಪ್ರತಿಭಟನೆ ನಡೆಸುತ್ತಿದ್ದರು. ಈಗ ದಿನೇಶ್ ಗುಂಡೂರಾವ್ ಮತ್ತು ಅವರ ತಂಡ ಯಾರ ವಿರುದ್ಧ ಪ್ರತಿಭಟನೆ ನಡೆಸುತ್ತದೆ ಎಂದು ರವಿಕುಮಾರ್ ಪ್ರಶ್ನಿಸಿದರು.
ರಾಜ್ಯದಲ್ಲಿ 324 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಲೂ ಹೋದ ಕಡೆಯಲ್ಲೆಲ್ಲ ಕಣ್ಣೀರು ಹಾಕುತ್ತಾರೆ.ಅವರಿಗೆ ಕಣ್ಣೀರಿಗೆ ಕಾರಣವಾದರೂ ಏನು ಆ ನೋವಿನ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ಕುಹಕವಾಡಿದರು.
ಅಮಿತ್ ಷಾ ಭೇಟಿ: ಇದೇ 9ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ತುಮಕೂರಿಗೆ ಆಗಮಿಸಲಿದ್ದಾರೆ. ಮೊದಲು ಸಿದ್ದಗಂಗಾ ಶ್ರೀಗಳನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆಯಲಿದ್ದಾರೆ. ನಂತರ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಸಂಜೆ ಬೂತ್ ಕಮಿಟಿ ಸಭೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಕಾರ್ಯಕರ್ತರ ಜೊತೆ ವಿಶೇಷ ಸಭೆ ನಡೆಸಿ ನಂತರ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.