ಬೆಂಗಳೂರು, ಜ.5- ನಗರದಲ್ಲಿ ಹೆಚ್ಚುತ್ತಿರುವ ಕ್ಷಯ ರೋಗವನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು ಸಕ್ರಿಯ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಮ್ಮಿಕೊಂಡಿದ್ದಾರೆ.
ಹತ್ತು ದಿನಗಳ ಕಾಲ ನಡೆಯುವ ಈ ಆಂದೋಲನದಲ್ಲಿ ಪಾಲಿಕೆ ಆರೋಗ್ಯ ಕಾರ್ಯಕರ್ತರು ರೋಗ ಹರಡುವ ಸಾಧ್ಯತೆ ಇರುವ ಪ್ರದೇಶಗಳ ಪ್ರತಿಯೊಂದು ಮನೆಗೆ ಭೇಟಿ ನೀಡಿ ರೋಗ ಲಕ್ಷಣ ಕಂಡುಬರುವ ವ್ಯಕ್ತಿಗಳ ಕಫ ಪರೀಕ್ಷೆ ಮಾಡುತ್ತಿದ್ದಾರೆ.
ಪರಿಶೀಲನೆ ಸಂದರ್ಭದಲ್ಲಿ ರೋಗ ಲಕ್ಷಣ ಕಂಡುಬರುವ ವ್ಯಕ್ತಿಗಳಿಗೆ ಪಾಲಿಕೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು.
ಆರೋಗ್ಯ ಕಾರ್ಯಕರ್ತರು ರೋಗ ಪತ್ತೆ ಪರಿಶೀಲನೆಗೆ ಆಗಮಿಸಿದಾಗ ಸಾರ್ವಜನಿಕರು ಅವರಿಗೆ ಸಹಕಾರ ನೀಡಬೇಕು.15 ದಿನಗಳಿಗೂ ಹೆಚ್ಚು ಕಾಲ ಕೆಮ್ಮು, ಜ್ವರ ಕಂಡುಬಂದರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಸಿಕೊಳ್ಳುವಂತೆ ಮೇಯರ್ ಗಂಗಾಂಬಿಕೆ ಕರೆ ನೀಡಿದ್ದಾರೆ.
ಅಭಿಯಾನದ ನಿರ್ದೇಶಕರಾದ ಬಿ.ಎಸ್.ರಮೇಶ್, ಆರೋಗ್ಯ ನಿರ್ದೇಶಕ ಡಾ.ಪ್ರಭಾಕರ್, ಜಂಟಿ ನಿರ್ದೇಶಕಿ ಡಾ.ಮಂಜುಳಾ, ರಾಜ್ಯ ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಾರ ಡಾ.ಶಾಜಿಯಾ ಅಂಜುಮ್ ಹಾಗೂ ಯೋಜನಾ ಸಮನ್ವಯಾಧಿಕಾರಿ ಡಾ.ಅರುಂಧತಿ ದಾಸ್ ಮತ್ತಿತರರು ಆಂದೋಲನದಲ್ಲಿ ಪಾಲ್ಗೊಂಡಿದ್ದರು.