ಬೆಂಗಳೂರು,ಜ.5-ಇಂಧನ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ಬೆಂಗಳೂರು ಮಹಾನಗರದ ಜನರ ಜೇಬಿಗೆ ಸಧ್ಯದಲ್ಲೇ ಕತ್ತರಿ ಬೀಳಲಿದೆ. ಅದುವೇ ಆಟೋ ಪ್ರಯಾಣ ದರ ಏರಿಕೆ!
ಆಟೋ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಬೇಕೆಂದು ಆಟೋ ಚಾಲಕರ ಸಂಘ ಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ವಾರದಿಂದ ಪರಿಷ್ಕøತ ನೂತನ ದರ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.
ಇನ್ನು ಮುಂದೆ ಆಟೋ ಪ್ರಯಾಣ ದರ ಕನಿಷ್ಠ 30 ರೂ.ನಿಂದ ಪ್ರಾರಂಭವಾಗಲಿದೆ. ಪ್ರಸ್ತುತ 25 ರೂ.ಇದ್ದು, ಕನಿಷ್ಠ 5 ರೂ. ಹೆಚ್ಚಳ ಮಾಡಲಾಗುವುದು ಎಂದು ತಿಳಿದುಬಂದಿದೆ.
ಪ್ರಸ್ತುತ 1.8 ಕಿ.ಮೀಗೆ 25 ರೂ. ದರವನ್ನು ನಿಗದಿಪಡಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ 30 ರೂ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.
ಡೀಸೆಲ್, ಪೆಟ್ರೋಲ್ ಹಾಗೂ ಎಲ್ಪಿಜಿ ಗ್ಯಾಸ್ ದರ ಏರಿಕೆಯಾಗಿರುವುದರಿಂದ ಆಟೋ ಪ್ರಯಾಣ ದರವನ್ನು ಹೆಚ್ಚಳ ಮಾಡುವಂತೆ ಚಾಲಕರ ಸಂಘ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಆಯುಕ್ತರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಮೂಲ ದರವನ್ನು 25ರಿಂದ 30 ರೂ.ಗೆ ಹೆಚ್ಚಳ ಮಾಡಬೇಕು, ಪ್ರತಿ ಕಿ.ಮೀಗೆ 13ರಿಂದ 15 ರೂ.ಗೆ ಏರಿಸಬೇಕೆಂಬ ಬೇಡಿಕೆಯನ್ನು ಆಟೋ ಚಾಲಕರ ಸಂಘ ಮುಂದಿಟ್ಟಿದೆ.
ಕಳೆದ ಐದು ವರ್ಷಗಳಿಂದ ಆಟೋ ದರವನ್ನು ಪರಿಷ್ಕರಣೆ ಮಾಡಿಲ್ಲ. ಅಂದು ಒಂದು ಲೀಟರ್ಗೆ ಡೀಸೆಲ್ ದರ 50 ರೂ. ಇತ್ತು.ಇಂದು 70 ರೂ.ಗೆ ಹೆಚ್ಚಳವಾಗಿದೆ. ಅಂದರೆ ಸುಮಾರು ಒಂದು ಲೀಟರ್ಗೆ 20 ರೂ. ಹೆಚ್ಚಳವಾಗಿದೆ. ಆದರೆ ಆಟೋ ದರದಲ್ಲಿ ಮಾತ್ರ ಅದೇ ಸ್ಥಿತಿಯಲ್ಲಿದೆ.ಇದರಿಂದ ನಾವು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಟೋ ಪ್ರಯಾಣ ದರವನ್ನು ಏರಿಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಪ್ರತಿ ವರ್ಷ ದರ ಏರಿಕೆಗೆ ಸರ್ಕಾರ ಸಮ್ಮತಿಸುತ್ತದೆ.
ಆದರೆ ನಮ್ಮಲ್ಲಿ ಮಾತ್ರ ಐದು ವರ್ಷದವರೆಗೆ ಹೆಚ್ಚಳ ಮಾಡಲು ಸಾರಿಗೆ ಇಲಾಖೆ ಅವಕಾಶ ಕೊಟ್ಟಿಲ್ಲ. ಈ ಬಾರಿ ಏರಿಕೆ ಮಾಡದಿದ್ದರೆ ಕಷ್ಟವಾಗುತ್ತದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ 1.25 ಲಕ್ಷ ಆಟೋಗಳು ಪರಾವನಗಿ ಪಡೆದಿವೆ. ಆದರೆ ಸುಮಾರು 50 ಸಾವಿರಕ್ಕೂ ಹೆಚ್ಚು ಆಟೋಗಳು ಅನಧಿಕೃತವಾಗಿ ಚಾಲನೆ ಮಾಡುತ್ತಿವೆ. ಅಧಿಕೃತವಾಗಿ ಪರಾವನಗಿ ಪಡೆದರೆ ನಾವು ರಸ್ತೆ ಸಾರಿಗೆ ಸೇರಿದಂತೆ ಹಲವು ರೀತಿಯ ತೆರಿಗೆಗಳನ್ನು ಕಟ್ಟಬೇಕು. ಅನಧಿಕೃತವಾಗಿದ್ದರೆ ಯಾವುದನ್ನೂ ಕಟ್ಟಬೇಕಿಲ್ಲ. ಇದರಿಂದ ನಮಗೆ ಹೊಡೆತ ಬೀಳುತ್ತದೆ ಎಂದು ಆಟೋ ಚಾಲಕರು ಹೇಳುತ್ತಿದ್ದಾರೆ.
ಅನಧಿಕೃತ ಆಟೋಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನ್ಯಾಯಬದ್ಧವಾಗಿ ಆಟೋ ನಡೆಸಿದರೆ ನಮಗೆ ನಿರ್ವಹಣೆ ಮಾಡಲು ಆಗುವುದಿಲ್ಲ.
ದರ ಏರಿಕೆ ಮಾಡದಿದ್ದರೆ ಅನಿವಾರ್ಯವಾಗಿ ನಾವು ಮುಷ್ಕರ ಮಾಡಬೇಕಾಗುತ್ತದೆ ಎಂದು ಕೆಲ ಆಟೋ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಓಲಾ ಮತ್ತು ಊಬರ್ ಹಾವಳಿಯಿಂದಾಗಿಯೂ ನಮ್ಮ ದೈನಂದಿನ ಆದಾಯ ಸಂಗ್ರಹದ ಮೇಲೆ ಹೊಡೆತ ಬೀಳುತ್ತದೆ ಸಿಲಿಂಡರ್ ಗ್ಯಾಸ್ ಕೂಡ ಏರಿಕೆಯಾಗಿದೆ. ಇದರ ಜೊತೆಗೆ ಡೀಸೆಲ್-ಪೆಟ್ರೋಲ್ ದರ ಪರಿಷ್ಕರಣೆಯಾಗುತ್ತಲೇ ಇದೆ. ಹೀಗಾಗಿ ಆಟೋ ಪ್ರಯಾಣ ದರವನ್ನು ಹೆಚ್ಚಳ ಮಾಡಬೇಕೆಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಆಟೋ ಚಾಲಕರ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಈ ವಾರಾಂತ್ಯಕ್ಕೆ ಪ್ರಯಾಣ ದರವನ್ನು ಪರಿಷ್ಕರಿಸುವ ಸಾಧ್ಯತೆ ನಿಚ್ಚಳವಾಗಿದೆ.