ಶಬರಿಮಲೆ ಪ್ರವೇಶಿಸಿದ ಮಹಿಳೆಯರು ಉಳಿದುಕೊಂಡಿದ್ದು ಕೊಡಗಿನಲ್ಲಿ!; ಸಿಸಿಟಿವಿಯಿಂದ ಬಯಲಾಯ್ತು ಸತ್ಯ

ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ ವಿಚಾರ ಸದ್ಯ ಚರ್ಚೆಯಲ್ಲಿದೆ. ಈ ವಿಷಯದಲ್ಲಿ ಕೇರಳಾದ್ಯಂತ ತೀವ್ರ ಪ್ರತಿಭಟನೆಯೂ ನಡೆಯುತ್ತಿದೆ. ಅಚ್ಚರಿ ಎಂದರೆ ದೇಗುಲ ಪ್ರವೇಶಕ್ಕೂ ಮೊದಲು ಈ ಮಹಿಳೆಯರು ಉಳಿದುಕೊಂಡಿದ್ದು ಕೊಡಗಿನಲ್ಲಿ ಎನ್ನುವ ವಿಚಾರ ಸಿಸಿಟಿವಿ ದೃಶ್ಯಾವಳಿಗಳಿಂದ ಸಾಬೀತಾಗಿದೆ.

ಬಿಂದು ಹಾಗೂ ಕನಕಾ ದುರ್ಗಾ ಹೆಸರಿನ ಇಬ್ಬರು ಬುಧವಾರ (ಜ.2) ಬೆಳಿಗ್ಗೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿದ್ದರು. ಇದಕ್ಕೂ ಮೊದಲು ಅಂದರೆ, ಡಿ.29ರಂದು ಇಬ್ಬರೂ ವಿರಾಜ್​ಪೇಟೆಯ ದೊಡ್ಡಚೌಕಿ ಸಮೀಪದ ಸೀತಾಲಕ್ಷ್ಮಿ ಲಾಡ್ಜ್​ನಲ್ಲಿ ಉಳಿದುಕೊಂಡಿದ್ದರು ಎನ್ನುವ ವಿಚಾರ ಈಗ ಬಹಿರಂಗವಾಗಿದೆ.

ಬಿಂದು ಹಾಗೂ ಕನಕಾ ಡಿ.29ರಂದು ಮಧ್ಯಾಹ್ನ 2.12ಕ್ಕೆ ಲಾಡ್ಜ್​ಗೆ ಚೆಕ್​ ಇನ್​ ಆಗಿದ್ದರು. ನಂತರ ಎರಡು ದಿನಗಳ ಕಾಲ ಕೊಡಗು ವೀಕ್ಷಣೆಯಲ್ಲಿ ತೊಡಗಿದ್ದರು. ಇವರ ಫೋಟೋಗಳು ಟಿವಿ, ಪೇಪರ್​ಗಳಲ್ಲಿ ಬರುತ್ತಿದ್ದಂತೆ ಸ್ಥಳೀಯರಿಗೆ ಇವರ ಗುರುತು ಸಿಕ್ಕಿದೆ. “ನಮ್ಮ ಲಾಡ್ಜ್​ನಲ್ಲಿ ಉಳಿದುಕೊಂಡಿದ್ದ ಮಹಿಳೆಯರು ಸಾಮಾನ್ಯ ಉಡುಗೆಯನ್ನೇ ತೊಟ್ಟಿದ್ದರು. ಅವರು ಯಾವುದೇ ಮಾಲೆ ಧರಿಸಿರಲಿಲ್ಲ ಅಥವಾ ಸಾಂಪ್ರದಾಯಿಕ ಬಟ್ಟೆ ಹಾಕಿರಲಿಲ್ಲ” ಎಂದು ಲಾಡ್ಜ್​​ನ ಸಿಬ್ಬಂದಿ ತಿಳಿಸಿದ್ದಾರೆ.

ಯಾವುದೇ ಪೊಲೀಸ್​ ಭದ್ರತೆ ಇಲ್ಲದೆ ಬಿಂದು ಹಾಗೂ ಕನಕಾ ದೇಗುಲದ ಒಳಗೆ ಸಾಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈ ವಿಚಾರ ಅಯ್ಯಪ್ಪ ಭಕ್ತರಲ್ಲಿ ಆಕ್ರೋಶಕ್ಕೂ ಕಾರಣವಾಗಿತ್ತು. ಇತ್ತ ಮಂದಿರದ ಶುದ್ಧಿಗೆ ದೇವಸ್ಥಾನದ ಬಾಗಿಲನ್ನು ಮುಚ್ಚಿದರೆ, ಅತ್ತ ಆರ್​ಎಸ್​ಎಸ್​ ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟನೆ ಆರಂಭಿಸಿದ್ದವು. ಈ ವೇಳೆ ಬಿಜೆಪಿ ಕಾರ್ಯಕರ್ತನೋರ್ವ ಮೃತಪಟ್ಟ ಘಟನೆಯೂ ನಡೆದಿದೆ. ಇನ್ನು, ನಿನ್ನೆ ಕೇರಳ ಬಂದ್​ ನಡೆಸಲಾಯಿತು. ಈ ವೇಳೆ ಹಿಂಸಾಚಾರ ಏರ್ಪಟ್ಟ ಬಗ್ಗೆ ವರದಿ ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ