ಬೆಂಗಳೂರು, ಜ.4- ರಾಜ್ಯದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಕುಂಟಿತವಾಗಲು ಹಲವು ಕಾರಣಗಳಿವೆ. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿದರೆ ಉತ್ತಮ ಬೆಳೆ ಬೆಳೆಯಲು ಅನುಕೂಲವಾಗಲಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿ ಆಯೋಜಿಸಿದ್ದ ಕೃಷಿ ತಂತ್ರಜ್ಞರ ಸಂಸ್ಥೆಯ ಸುವರ್ಣಮಹೋತ್ಸವ ಸಮಾರಂಭ ಹಾಗೂ ರೈತ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 135 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆ ಮಾಡಲಾಗುತ್ತಿದೆ.ವಿವಿಧ ರೀತಿಯ ಬೆಳೆಗಳು ಒಳಗೊಂಡಂತೆ ಉತ್ಪಾದನೆ ಕುಂಟಿತವಾಗಲು ಹಲವು ಕಾರಣಗಳಿವೆ. ಮಳೆ ಹಾನಿ ಸೇರಿದಂತೆ ರಸಗೊಬ್ಬರ, ಸಕಾಲದಲ್ಲಿ ಬಿತ್ತನೆ ಬೀಜ ಸಿಗದೇ ಇರುವುದು ಉತ್ಪಾದನೆ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ರೈತರ ಆದಾಯ ಹೆಚ್ಚಿಸಲು ಸಹಾಯಧನದ ರೂಪದಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕೃಷಿ ತಂತ್ರಜ್ಞರ ಸಂಸ್ಥೆಯು ತಾಂತ್ರಿಕ ಮಾಹಿತಿ ಒದಗಿಸುತ್ತಿದೆ.ಕಳೆದ 10 ವರ್ಷಗಳಲ್ಲಿ 8 ವರ್ಷ ಬರಗಾಲವೇ ಇದೆ.ನಮ್ಮದು ಒಣಭೂಮಿ ಹೊಂದಿರುವ ರಾಜ್ಯ.ಮಳೆ ಆಶ್ರಿತ ಪ್ರದೇಶವಾಗಿರುವುದು ಈ ನೂನ್ಯತೆಗೆ ಕಾರಣ ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎ.ಬಿ.ಪಾಟೀಲ್ ಹಾಗೂ ರೈತರನ್ನು ಸನ್ಮಾನಿಸಲಾಯಿತು.
ವಿಶ್ರಾಂತ ಕುಲಪತಿ ಡಾ.ಎಂ.ಮಹದೇವಪ್ಪ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎಂ.ಮಲ್ಲಪ್ಪ, ಉಪಾಧ್ಯಕ್ಷ ಈಶ್ವರಪ್ಪ, ಕಾರ್ಯದರ್ಶಿ ಕೆ.ಕೃಷ್ಣಪ್ಪ, ಖಜಾಂಚಿ ಡಾ.ಶಿವಮೂರ್ತಿಪ್ಪ, ಜಂಟಿ ಕಾರ್ಯದರ್ಶಿ ಆರ್.ರಾಮಮೂರ್ತಿ ಉಪಸ್ಥಿತರಿದ್ದರು.