ಜ.9ರಂದು ಕೆ.ಅರ್.ಎಸ್. ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಷೇದಕ್ಕೆ ಒತ್ತಾಯಿಸಿ ಶ್ರೀರಂಗಪಟ್ಟಣದಲ್ಲಿ ಜನಪರ ವೇದಿಕೆಯಿಂದ ಪ್ರತಿಭಟನೆ

ಬೆಂಗಳೂರು, ಜ.4- ನಾಡಿನ ಜನರ ಜೀವನಾಡಿಯಾಗಿರುವ ಕೃಷ್ಣರಾಜಸಾಗರ (ಕೆಆರ್‍ಎಸ್) ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಷೇಧಿಸುವಂತೆ ಒತ್ತಾಯಿಸಿ ಇದೇ 9ರಂದು ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ಇಳಿದು ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಜನಪರ ವೇದಿಕೆ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‍ಗೌಡ ಮಾತನಾಡಿ, ಅಕ್ರಮ ಗಣಿಗಾರಿಕೆಯಿಂದ ಕೆಆರ್‍ಎಸ್ ಡ್ಯಾಮ್‍ಗೆ ಹಾನಿ ಉಂಟಾಗುವುದರಿಂದ ಈ ಗಣಿಗಾರಿಕೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗಳಿಗೆ ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹಾಗಾಗಿ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಜ.9ರಂದು ಬೆಳಗ್ಗೆಯಿಂದ ಸಂಜೆವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು.

ಸರ್ಕಾರ ಕೈಗೊಂಡಿರುವ ಡಿಸ್ನಿಲ್ಯಾಂಡ್ ಹಾಗೂ 120 ಎತ್ತರದ ಕಾವೇರಿ ಪ್ರತಿಮೆ ನಿರ್ಮಿಸಲು ಹೊರಟಿದೆ. ಇದನ್ನು ನಾವು ವಿರೋಧಿಸುತ್ತೇವೆ. 80 ವರ್ಷಗಳ ಇತಿಹಾಸ ಇರುವ ಅಣೆಕಟ್ಟೆಗೆ ಇದರಿಂದ ಅಪಾಯವಿದೆ. ಆದ್ದರಿಂದ ಡಿಸ್ನಿಲ್ಯಾಂಡ್ ನಿರ್ಮಿಸಬಾರದು ಎಂದು ತಿಳಿಸಿದರು.
ಇಲ್ಲಿ ಕಾವೇರಿ ಪ್ರತಿಮೆ ನಿರ್ಮಿಸುವ ಬದಲು ಗಗನ ಚುಕ್ಕಿ-ಭರಚುಕ್ಕಿಯನ್ನು ಅಭಿವೃದ್ಧಿಪಡಿಸಲಿ.ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ