ಧಾರವಾಡ: 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧಾರಾನಗರಿ ಧಾರವಾಡ ಸಜ್ಜಾಗಿದೆ. ಇನ್ನೇನು ಕೆಲಹೊತ್ತಲ್ಲೇ ಆರಂಭವಾಗಲಿರುವ ನುಡಿಜಾತ್ರೆ ಮೂರು ದಿನಗಳ ಕಾಲ ಕನ್ನಡ ಸಾಹಿತ್ಯದ ಸವಿಯನ್ನು ಉಣಬಡಿಸಲಿದೆ.
ಇಡೀ ನಗರವೇ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರನ್ನು ರಂಗುರಂಗಾಗಿ ನಿಂತು ಸ್ವಾಗತಿಸಲು ಸಜ್ಜಾಗಿದ್ದು, ಕರ್ನಾಟಕ ಕಲಾ ಕಾಲೇಜಿನಿಂದ ಕೃಷಿ ವಿಶ್ವವಿದ್ಯಾಲಯದವರೆಗೂ ಸಾಗುವ ಅಧ್ಯಕ್ಷರ ಮೆರವಣಿಗೆ ರಾಜಮಾರ್ಗವೂ ಅನೇಕ ಎಡರು ತೊಡರುಗಳ ಮಧ್ಯೆ ಕೆಂಪು, ಹಳದಿ ತೋರಣಗಳೊಂದಿಗೆ ಸಜ್ಜಾಗಿ ನಿಂತಿದೆ. ನಗರದ 40ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸಲು ಸಜ್ಜಾಗಿದ್ದು, ಗುರುವಾರ ಮಧ್ಯಾಹ್ನದವರೆಗೂ ಸಮ್ಮೇಳನದಲ್ಲಿ ಅವರು ಮಾಡಬೇಕಾದ ಕಾರ್ಯಗಳ ಕುರಿತು ವಿಶೇಷ ತರಬೇತಿ ಮತ್ತು ಸಲಹೆ ನೀಡಿ ಅಣಿಗೊಳಿಸಲಾಗಿದೆ.
ಸಮ್ಮೇಳನ ಉದ್ಘಾಟನೆ:
ಬೆಳಗ್ಗೆ 11 ಗಂಟೆಗೆ ಸಿಎಂ ಕುಮಾರಸ್ವಾಮಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ್ ಪಾಟೀಲ ಮಾತನಾಡುವರು. ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ್ ಕಂಬಾರ ಸಮ್ಮೇಳನ ಉದ್ದೇಶಿಸಿ ಮಾತನಾಡುವರು. 8:30ಕ್ಕೆ ಕರ್ನಾಟಕ ಕಲಾ ಮಹಾವಿದ್ಯಾಲಯ ಮೈದಾನದಿಂದ ಸಮ್ಮೇಳನಾಧ್ಯಕ್ಷರ ಮರವಣಿಗೆ ಆರಂಭಗೊಳ್ಳಲಿದ್ದು, ಜುಬಿಲಿ ವೃತ್ತ, ವಿವೇಕಾನಂದ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ ಮೂಲಕ ಕೃಷಿ ವಿವಿ ತಲುಪಲಿದೆ.
ವೇದಿಕೆ ಝಗಮಗ:
ಉತ್ತರ ಕರ್ನಾಟಕದ ಹೆಬ್ಟಾಗಿಲು ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಅತ್ಯಂತ ಆಕರ್ಷಕವಾಗಿ ನಿರ್ಮಿಸಲಾಗಿದೆ. ವೇದಿಕೆಯ ಹಿಂಭಾಗದಲ್ಲಿ 8 ಜನ ಜ್ಞಾನಪೀಠ ಸಾಹಿತಿಗಳ ಭಾವಚಿತ್ರ, ಅದರ ಪಕ್ಕದಲ್ಲಿ ನವಿಲುಗರಿಯ ಕುಂಚದ ಕಲಾಪಟಗಳು, ಅದರೊಂದಿಗೆ ಕಿತ್ತೂರು ಕರ್ನಾಟಕದ ಹೆಮ್ಮೆಯ ರಣಕಲಿಗಳಾದ ವೀರರಾಣಿ ಕಿತ್ತೂರು ಚೆನ್ನಮ್ಮಾ ಮತ್ತು ಸಂಗೊಳ್ಳಿ ರಾಯಣ್ಣನ ದೈತ್ಯಚಿತ್ರಪಟಗಳನ್ನು ಅಳವಡಿಸಲಾಗಿದೆ. ವೇದಿಕೆಯ ಕೆಳಭಾಗದ ಅಂಕಣಕ್ಕೆ ಗೀರ ತಳಿಯ ಎತ್ತುಗಳನ್ನು ಎದುರು ಬದುರಾಗಿ ನಿಲ್ಲಿಸಿದ ಚಿತ್ರಗಳು ಗಮನ ಸೆಳೆಯುತ್ತಿವೆ.
ಮೊದಲ ಗೋಷ್ಠಿಯತ್ತ ಚಿತ್ತ:
ಸಮ್ಮೇಳನದ ಮೊದಲ ದಿನ ನಡೆಯುವ ಮೊದಲ ಗೋಷ್ಠಿಯೇ ಉತ್ತರ ಕರ್ನಾಟಕದ ಅಭಿವೃದ್ಧಿ ಸವಾಲುಗಳು ಮತ್ತು ಸಮಸ್ಯೆಗಳ ಕುರಿತಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಎಂ.ಜಾಮದಾರ, ಹೋರಾಟಗಾರ ಎಸ್.ಆರ್.ಹಿರೇಮಠ, ಡಾ|ಗುರುಪಾದ ಮರಿಗುದ್ದಿ ವಿಷಯ ಮಂಡಿಸಲಿದ್ದಾರೆ. ಮಾಜಿ ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಈ ಗೋಷ್ಠಿಯತ್ತಲೇ ಸಾಹಿತ್ಯಾಸಕ್ತರ ಚಿತ್ತ ನೆಟ್ಟಿದೆ.
ರಾಜಸ್ಥಾನದಿಂದ ಬಂದವ ಇಂದು ಭೋಜನ ಉಸ್ತುವಾರಿ
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದವರಿಗೆ ತರಹೇವಾರಿ ಭೋಜನ ಸಿದ್ಧಪಡಿಸುತ್ತಿರುವ ಬೈರು ಕೇಟರರ್ಸ್ ಮಾಲೀಕ ಬಾಬುಲಾಲ್ ಪ್ರಜಾಪ್ರತಿ ಯಶೋಗಾಥೆ ಕೂಡ ಸಮ್ಮೇಳನದಲ್ಲಿ ಪಾಲ್ಗೊಂಡವರಿಗೆ ವಿಶೇಷ ಎನಿಸುತ್ತಿದೆ. 15 ವರ್ಷದ ಪೊರನಿದ್ದಾಗ ಧಾರವಾಡಕ್ಕೆ ರಾಜಸ್ತಾನದಿಂದ ದುಡಿಯಲು ಬಂದವ ಇಂದು ಸಮ್ಮೇಳನದ ಅಡುಗೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. 1500 ಜನ ಬಾಣಸಿಗರ ತಂಡದಿಂದ 25ಕ್ಕೂ ಹೆಚ್ಚು ಬಗೆಯ ಭಕ್ಷéಗಳನ್ನು ಸಿದ್ಧಪಡಿಸುತ್ತಿದ್ದಾರೆ. ಯಾವ ಸ್ಥಳದಲ್ಲಿ ಬದುಕು ಕಟ್ಟಿಕೊಂಡಿದ್ದನೋ ಅದೇ ಸ್ಥಳದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಭೋಜನ ಸಿದ್ಧಪಡಿಸುವ ಹೆಮ್ಮೆ ನನ್ನದು ಎನ್ನುತ್ತಾರೆ ಬಾಬುಲಾಲ್ ಪ್ರಜಾಪತಿ.