ಪ್ರಧಾನಿ ಮೋದಿ ಕುರಿತ ಟ್ರಂಪ್ ವ್ಯಂಗ್ಯಕ್ಕೆ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ

ನವದೆಹಲಿ: ಅಪ್ಘಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಹಣಕಾಸು ನೆರವು ನೀಡಿದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವ್ಯಂಗ್ಯವಾಡಿದ್ದಕ್ಕೆ ಕಾಂಗ್ರೆಸ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಅಹ್ಮದ್ ಪಟೇಲ್, ಭಾರತದ ಪ್ರಧಾನಿಯವರ ಬಗ್ಗೆ ಅಮೆರಿಕ ಅಧ್ಯಕರು ಹೇಳಿಕೆ ಸ್ವೀಕಾರಾರ್ಹವಲ್ಲ ಇದಕ್ಕೆ ನಮ್ಮ ಸರ್ಕಾರ ಸೂಕ್ತ ಪ್ರತಿಕ್ರಿಯೆ ನೀಡಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

2004ರ ನಂತರ ಭಾರತವು ಅಫ್ಗಾನಿಸ್ತಾನದಲ್ಲಿ ಉತ್ತಮ ರಸ್ತೆ, ಅಣೆಕಟ್ಟೆಗಳನ್ನು ನಿರ್ಮಿಸಿದೆ. 3 ಶತಕೋಟಿ ಡಾಲರ್ ನೆರವು ನೀಡಿದೆ ಎಂಬುದನ್ನು ಅಮೆರಿಕಕ್ಕೆ ನೆನಪಿಸಬಯಸುತ್ತೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರಿಯ ಟ್ರಂಪ್ ಅವರೇ, ಭಾರತದ ಪ್ರಧಾನಿಯವರನ್ನು ಅಣಕಿಸುವುದನ್ನು ನಿಲ್ಲಿಸಿ. ಅಫ್ಘಾನಿಸ್ತಾನ ವಿಷಯದಲ್ಲಿ ಭಾರತಕ್ಕೆ ಅಮೆರಿಕದಿಂದ ಉಪದೇಶ ಬೇಕಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೆವಾಲ ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವಧಿಯಲ್ಲಿ ಅಫ್ಗಾನಿಸ್ತಾನದ ಸಂಸತ್ತಿನ ಕಟ್ಟಡ ನಿರ್ಮಾಣಕ್ಕೆ ಭಾರತ ನೆರವಾಗಿದ್ದನ್ನೂ ಅವರು ಸ್ಮರಿಸಿಕೊಂಡಿದ್ದಾರೆ. ಮಾನವ ಕಲ್ಯಾಣಕ್ಕೆ ವ್ಯೂಹಾತ್ಮಕ ಆರ್ಥಿಕ ಸಹಭಾಗಿತ್ವವೂ ಅಗತ್ಯ. ಅಫ್ಗಾನಿಸ್ತಾನದ ಸಹೋದರ, ಸಹೋದರಿಯರ ಜತೆ ನಾವಿದ್ದೇವೆ ಎಂದು ಸರ್ಜೆವಾಲ ಹೇಳಿದ್ದಾರೆ.

ನನ್ನೊಂದಿಗೆ ಮಾತನಾಡುವಾಗ ಮೋದಿ ಅಫ್ಗಾನಿಸ್ತಾನದಲ್ಲಿನ ಗ್ರಂಥಾಲಯ ನಿರ್ಮಾಣದ ಬಗ್ಗೆ ಪದೇ ಪದೇ ಹೇಳುತ್ತಿದ್ದರು. ಅವರು ಬಹಳ ಚಾಲಾಕಿ. ಕೊನೆಗೂ, ಗ್ರಂಥಾಲಯ ನಿರ್ಮಾಣಕ್ಕೆ ಧನ್ಯವಾದ ಎಂದು ನಾವು ಹೇಳಬೇಕಾಯಿತು. ಆದರೆ, ಆ ಗ್ರಂಥಾಲಯವನ್ನು ಅಲ್ಲಿ ಯಾರು ಬಳಸುತ್ತಿದ್ದಾರೋ ಅದರಿಂದ ಪ್ರಯೋಜನವಾದರೂ ಏನು ಎಂದು ಹೇಳಿದ್ದರು.

Congress’ Show Of Support For PM Modi After Trump’s “Afghan Library” Barb

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ