ಬೆಂಗಳೂರು, ಜ.4- ಸ್ಪಷ್ಟ ಗಾತ್ರದ ಮತ್ತು ಅಲಂಕಾರಿಕ ಕಲ್ಲುಗಣಿಗಾರಿಕೆ (ಡೈಮೆನ್ಷನಲ್ ಆ್ಯಂಡ್ ಡೆಕೊರೀಟಿವ್) ಹಾಗೂ ಸಂಸ್ಕರಣೆ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಇದೇ 8ರಂದು ವಿಚಾರ ಸಂಕಿರಣ ಮತ್ತು ಸಂವಹನ ಸಭೆಯನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಎಫ್ಐಜಿಎಸ್ಐ ಪ್ರಧಾನ ಕಾರ್ಯದರ್ಶಿ ಎಸ್.ಕೃಷ್ಣಪ್ರಸಾದ್ ಮಾತನಾಡಿ, ಇದೇ 8ರಂದು ಲೀಮೆರೆಡಿಯನ್ ಹೋಟೆಲ್ನಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ನೈಸರ್ಗಿಕ ಕಲ್ಲು ಉದ್ಯಮದ ಹಿತ ಕಾಪಾಡುತ್ತಿರುವ ಫೆಡರೇಶನ್ ಆಫ್ ಇಂಡಿಯನ್ ಗ್ರಾನೈಟ್ ಆ್ಯಂಡ್ ಸ್ಟೋನ್ ಇಂಡಸ್ಟ್ರಿ, ಎಫ್ಐಎಂಐ, ಜಿಯಾಲಜಿಕಲ್ ಸೊಸೈಟ್ ಆಫ್ ಇಂಡಿಯಾ ಸಹಕಾರ ನೀಡಿವೆ ಎಂದು ಹೇಳಿದರು.
ನಮ್ಮ ಉದ್ಯಮ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಸದಸ್ಯರಿಗೆ ಪರಿಸರ, ಅರಣ್ಯ ಹಾಗೂ ವನ್ಯ ಜೀವಿ ಕಾಯ್ದೆಗಳ ಕುರಿತು ಮಾಹಿತಿ ನೀಡಲು ಮತ್ತು ಈ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಹೊಸ ನಿಯಮಗಳನ್ನು ಪಾಲಿಸಲು ಅನುಕೂಲವಾಗುವಂತೆ ಈ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಈ ವಿಚಾರ ಸಂಕಿರಣಕ್ಕೆ ಕೇಂದ್ರ ಸರ್ಕಾರದ ಗಣಿಗಾರಿಕೆ ಸಚಿವಾಲಯ, ವಾಣಿಜ್ಯ ಸಚಿವಾಲಯ, ಕರ್ನಾಟಕ ಸರ್ಕಾರ, ಕೆಪೆಕ್ಸಿಲ್ ಸಹಕಾರ ನೀಡಲಿವೆ ಎಂದರು.
ನೈಸರ್ಗಿಕ ಕಲ್ಲು ಉದ್ಯಮದ ವಿವಿಧ ವಲಯಗಳ ತಜ್ಞರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಬೆಳಗ್ಗೆ 11ರಿಂದ 1.3ರವರೆಗೆ ಹಾಗೂ 2.30ರಿಂದ ಸಂಜೆ 5 ಗಂಟೆವರೆಗೆ ಎರಡು ಹಂತಗಳಲ್ಲಿ ಗೋಷ್ಠಿಗಳಿರುತ್ತವೆ.ಸಚಿವ ರಾಜಶೇಖರ್ ಪಾಟೀಲ್ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ.ಗಣಿ ಮತ್ತು ಸಣ್ಣ ಮಧ್ಯಮ ಕೈಗಾರಿಕಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕೃಷ್ಣಪ್ರಸಾದ್ ತಿಳಿಸಿದ್ದಾರೆ.