
ತಿರುವನಂತಪುರ: ಈಗಾಗಲೇ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಇಬ್ಬರು ಮಹಿಳೆಯರ ಪ್ರವೇಶ ಮಾಡಿದ್ದು, ಅವರ ಪ್ರವೇಶವನ್ನು ಖಂಡಿಸಿ ಪ್ರತಿಭಟನೆ ನಡೆದಿತ್ತು. ಇದರ ಬೆನ್ನಲ್ಲೆ ಈಗ ಮೂರನೇ ಮಹಿಳೆ ಶಬರಿಮಲೆ ಅಯ್ಯಪ್ಪನ ದೇವಾಲಯಕ್ಕೆ ಎಂಟ್ರಿ ಕೊಟ್ಟು ದರ್ಶನ ಪಡೆದುಕೊಂಡಿದ್ದಾರೆ.
43 ವರ್ಷದ ಶ್ರೀಲಂಕಾ ಮೂಲದ ಶಶಿಕಲಾ ಅವರು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಇವರು 18 ಮೆಟ್ಟಿಲುಗಳನ್ನು ಹತ್ತಿ ಹರಿಹರನ ಸುತನಿಗೆ ನಮಿಸಿದ್ದು, ಗುರುವಾರ ರಾತ್ರಿ ಸುಮಾರು 9.30ಕ್ಕೆ ಅಯ್ಯಪ್ಪನ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ರಾತ್ರಿ 11.30ಕ್ಕೆ ಸುರಕ್ಷಿತವಾಗಿ ಪಂಪಾಗೆ ವಾಪಸ್ ಹೋಗಿದ್ದಾರೆ.
ಈ ಹಿಂದೆ 44 ವರ್ಷದ ಬಿಂದು ಮತ್ತು 42 ವರ್ಷದ ಕನಕದುರ್ಗ ಮಹಿಳೆಯರು ಅಯ್ಯಪ್ಪ ದೇವಾಲಯಕ್ಕೆ ಎಂಟ್ರಿ ಕೊಟ್ಟು ದರ್ಶನ ಪಡೆದಿದ್ದಾರೆ. ಬಿಂದು ಕಾಲೇಜು ಉಪನ್ಯಾಸಕಿ ಮತ್ತು ಸಿಪಿಐ(ಎಂ) ಕಾರ್ಯಕರ್ತೆಯಾಗಿದ್ದು, ಕನಕದುರ್ಗ ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.
ಮಹಿಳೆಯರಿಬ್ಬರ ಪ್ರವೇಶದ ಬಳಿಕ ದೇವರನಾಡು ಕೇರಳ ಬೂದಿ ಮುಚ್ಚಿದ ಕೆಂಡದಂತಾಗಿದೆ. ಗುರುವಾರ ನಡೆದ ಬಂದ್ ಹಿಂಸಾತ್ಮಕ ರೂಪ ಪಡೆದಿದ್ದು, ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇನ್ನು ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಈ ಮಧ್ಯೆ ಕ್ಯಾಮೆರಾ ಹಿಡಿದು ವರದಿಗೆ ತೆರಳಿದ್ದವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಆದರೂ ಅಳುತ್ತಾ ವರದಿ ಮಾಡಿರುವ ಫೋಟೋ ವೈರಲ್ ಆಗಿದೆ