ಬೆಂಗಳೂರು, ಜ.4- ಮನುಷ್ಯ ಪರಿಸ್ಥಿತಿಯ ಗೊಂಬೆ ಎಂಬುದನ್ನು ಕೌಟುಂಬಿಕ ಕಥಾ ಹಂದರದಲ್ಲಿ ಮಿಳಿತಗೊಳಿಸಿ ತೆರೆಗೆ ತಂದಿರುವ ಆಡುವ ಗೊಂಬೆ ಚಿತ್ರ ಒಂದು ಸದಭಿರುಚಿಯ ಪ್ರೇಕ್ಷಕರ ಮನಗೆಲ್ಲುವ ಚಿತ್ರವಾಗಿದೆ.
ಸ್ಯಾಂಡಲ್‍ವುಡ್‍ನ ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್ ಅವರ 50ನೇ ಚಿತ್ರವಾದ ಆಡುವ ಗೊಂಬೆ ಸಂಬಂಧಗಳ ಸುಳಿಯಲ್ಲಿ ಜೀವನ ಏರಿಳಿತಗಳೊಂದಿಗೆ ಕಥೆ ಮುನ್ನಡೆದು ಕುತೂಹಲದೊಂದಿಗೆ ಉತ್ತಮ ಚಿತ್ರವೆನಿಸಿದೆ.
ಅಕ್ಕ-ತಮ್ಮ ಬಾಂಧವ್ಯದ ಚಿತ್ರದಲ್ಲಿ ಸಂಚಾರಿ ವಿಜಯ್ ತಮ್ಮನ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದರೆ, ಅಕ್ಕನಾಗಿ ಸುಧಾಬೆಳವಾಡಿ, ಭಾವನಾಗಿ ಅನಂತ್‍ನಾಗ್ ಅಭಿನಯ ಪಾತ್ರಕ್ಕೆ ನ್ಯಾಯ ಒದಗಿಸಿದೆ.
85ರ ಇಳಿ ವಯಸ್ಸಿನಲ್ಲಿ ನಿರ್ದೇಶಕರ ಚಿತ್ರಗಳ ಬಗೆಗಿನ ಉತ್ತಮ ಯೋಚನೆ ಒಂದು ಉತ್ತಮ ಚಿತ್ರವನ್ನೇ ಪ್ರೇಕ್ಷಕರಿಗೆ ನೀಡಿದೆ. ವಿಧಿ ಹೇಗೆಲ್ಲಾ ಮನುಷ್ಯನ ಜೀವನದಲ್ಲಿ ಆಡುತ್ತದೆ ಎಂಬುದರ ಪ್ರತಿ ರೂಪದಲ್ಲಿರುವ ಕಥೆಯಲ್ಲಿ ನಾಯಕನ ಜೀವನದಲ್ಲಿ ಮೂವರು ನಾಯಕಿಯರ ಪ್ರವೇಶವಾದರೂ ಯಾರೂ ನಾಯಕನ ಜೀವನದ ಸಂಗಾತಿಯಾಗುತ್ತಾರೆ ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.
ಸಾಫ್ಟ್‍ವೇರ್ ಉದ್ಯೋಗಿಯಾಗಿರುವ ವಿಜಯ್ ಜೀವನದಲ್ಲಿ ಅಕ್ಕನ ಇಬ್ಬರು ಹೆಣ್ಣುಮಕ್ಕಳ ಜತೆಗೆ ತನ್ನ ಸಹೋದ್ಯೋಗಿಯೂ ಬರುತ್ತಾರೆ.ಆದರೆ, ನಾವೆಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬಂತೆ ಆತನ ಜೀವನದಲ್ಲಾಗುವ ಏರಿಳಿತಗಳ ಚಿತ್ರಣವನ್ನು ಸೊಗಸಾಗಿ ಸೆರೆ ಹಿಡಿಯಲಾಗಿದೆ.
ಮೂವರು ನಾಯಕಿಯರ ಪಾತ್ರದಲ್ಲಿ ನಿರೋಶಾ ಶೆಟ್ಟಿ, ರಿಷಿಕಾ ಮಲ್ನಾಡ್ ಮತ್ತು ದಿಶಾ ಕೃಷ್ಣ ನಟಿಸಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತ ಎಸ್.ಕೆ.ಭಗವಾನ್ ಅವರೊಂದಿಗೆ ಸಂಗೀತ ನಿರ್ದೇಶನವನ್ನು ಹೇಮಂತ್‍ಕುಮಾರ್ ನಿಭಾಯಿಸಿದರೆ, ಚಿತ್ರ ನಿರ್ದೇಶನವನ್ನು ಶಿವಪ್ಪ ಹಾಗೂ ಅವರ ಪುತ್ರ ಸತೀಶ್ ವಹಿಸಿದ್ದಾರೆ.