ಬೆಂಗಳೂರು, ಜ.3- ಈವರೆಗೂ ರಾಜಕಾರಣಿಗಳು, ಉದ್ಯಮಿಗಳ ಮೇಲೆ ದಾಳಿ ನಡೆಸುತ್ತಿದ್ದ ಆದಾಯ ತೆರಿಗೆ ಅಧಿಕಾರಿಗಳು (ಐಟಿ) ಇದೇ ಮೊದಲ ಬಾರಿಗೆ ಕನ್ನಡ ಚಲನಚಿತ್ರ ರಂಗದ ಘಟಾನುಘಟಿ ನಟರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಹಲವರ ಮೇಲೆ ದಾಳಿ ನಡೆಸಿ ಸ್ಯಾಂಡಲ್ವುಡ್ಗೆ ಭಾರೀ ಆಘಾತ ನೀಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ರಾಕಿಂಗ್ ಸ್ಟಾರ್ ಯಶ್, ನಟ ಕಿಚ್ಚ ಸುದೀಪ್, ಕೋಟಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ವಿಧಾನಪರಿಷತ್ ಸದಸ್ಯ ಹಾಗೂ ನಿರ್ಮಾಪಕ ಸಿ.ಆರ್.ಮನೋಹರ್, ವಿತರಕ ಜಯಣ್ಣ , ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರ್ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಮಂದಿ ಮೇಲೆ 25 ಕಡೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಐಟಿ ಅಧಿಕಾರಿಗಳಿಗೆ ನಗದು, ಕೆಲವು ಮಹತ್ವದ ದಾಖಲೆ ಪತ್ರಗಳು ಲಭ್ಯವಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದಾಳಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ಏಕಕಾಲಕ್ಕೆ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಮೂಲಗಳ ಪ್ರಕಾರ ಕಳೆದ 15 ದಿನದಿಂದ ಬೆಂಗಳೂರು, ಪಣಜಿ, ಚೆನ್ನೈ, ಹೈದರಾಬಾದ್, ಅಮರಾವತಿ ಸೇರಿದಂತೆ ಮತ್ತಿತರ ಕಡೆಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಅಧಿಕಾರಿಗಳು ಚಿತ್ರನಟರು ಮತ್ತು ನಿರ್ಮಾಪಕರ ಮೇಲೆ ದಾಳಿ ನಡೆಸಲು ವ್ಯವಸ್ಥಿತವಾದ ಯೋಜನೆ ಸಿದ್ದಪಡಿಸಿದ್ದರು.
ಎಲ್ಲಿಯೂ ಕೂಡ ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿದ್ದ ಈ ತಂಡ ಅಂದುಕೊಂಡಂತೆಯೇ ಇಂದು ಬೆಳ್ಳಗ್ಗೆ 25ಕ್ಕೂ ಹೆಚ್ಚು ಕಡೆ ಏಕ ಕಾಲದಲ್ಲಿ ದಾಳಿ ನಡೆಸಿ ಕೊರೆವ ಚಳಿಯಲ್ಲೂ ನಟರು ಮತ್ತು ನಿರ್ಮಾಪಕರಿಗೆ ಬಿಸಿ ಮುಟ್ಟಿದ್ದಾರೆ.
ಎಲ್ಲೆಲ್ಲಿ ದಾಳಿ:
ಐಟಿ ಅಧಿಕಾರಿಗಳ ಒಂದು ತಂಡ ಸದಾಶಿವನಗರದಲ್ಲಿರುವ ಪುನೀತ್ ರಾಜ್ಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ತನಿಖಾಧಿಕಾರಿಗಳು ಕೆಲವು ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ.
ಇತ್ತೀಚೆಗೆ ಪುನೀತ್ ರಾಜ್ಕುಮಾರ್ ನಟಿಸಿದ್ದ ಎಲ್ಲಾ ಚಿತ್ರಗಳು ಯಶಸ್ವಿಯಾಗಿದ್ದವು. ಜೊತೆಗೆ ಪಿಆರ್ಕೆ ಆಡಿಯೋ ಕಂಪನಿಯನ್ನು ಆರಂಭಿಸಿದ್ದರು.ದಾಳಿ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ವಜ್ರಾಭರಣಗಳು, ಚಿನ್ನ ಪತ್ತೆಯಾದ ಹಿನ್ನೆಲೆಯಲ್ಲಿ ಮೂವರು ಚಿನ್ನದ ಪರಿಶೋಧಕರನ್ನು ಮನೆಗೆ ಕರೆಸಲಾಗಿತ್ತು.
ಇನ್ನು ಹೆಬ್ಬಾಳದ ಹೊರವರ್ತುಲ ರಸ್ತೆಯ ಮಾನ್ಯತಾ ಟೆಕ್ಪಾರ್ಕ್ ಬಳಿಯಿರುವ ಶಿವರಾಜ್ಕುಮಾರ್ ಮನೆ ಮೇಲೂ ಐಟಿ ತಂಡ ದಾಳಿ ನಡೆಸಿದೆ.
ಯಾವ ಕಾರಣಕ್ಕಾಗಿ ದಾಳಿ ನಡೆದಿದೆ ಎಂಬುದು ತಿಳಿದಿಲ್ಲ. ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನೂ ಸಹ ವಿಚಾರಣೆ ನಡೆಸಲು ಓರ್ವ ಮಹಿಳಾ ಅಧಿಕಾರಿಯನ್ನು ಸಹ ಮಧ್ಯಾಹ್ನದ ವೇಳೆಗೆ ಕರೆಸಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇತ್ತೀಚೆಗಷ್ಟೆ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿ ಹಿಂದಿನ ದಾಖಲೆಗಳನ್ನು ಪುಡಿ ಪುಡಿ ಮಾಡಿದ್ದ ರಾಕಿಂಗ್ ಯಶ್ ಅಭಿನಯದ ಕೆಜಿಎಫ್ ಚಿತ್ರ ನಿರ್ಮಾಪಕ ವಿಜಯ್ ಕಿರಂಗದೂರ್ ಅವರ ನಾಗರಭಾವಿ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೋಟಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರ ಮಹಾಲಕ್ಷ್ಮೀ ಬಡಾವಣೆಯ ನಿವಾಸದಲ್ಲೂ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಚಿತ್ರ ನಿರ್ಮಾಪಕ ಹಾಗೂ ಜೆಡಿಎಸ್ನ ವಿಧಾನಪರಿಷತ್ ಸದಸ್ಯ ಸಿ.ಆರ್.ಮನೋಹರ್ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ತಂಡ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ.
ಕತ್ರಿಗುಪ್ಪೆಯಲ್ಲಿರುವ ನಟ ಯಶ್ ನಿವಾಸಕ್ಕೂ ದಾಳಿ ನಡೆಸಿದ್ದಾರೆ. ಅಲ್ಲದೇ ಯಶ್ ಸಹೋದರಿ ಹಾಗೂ ಮಾವನ ಮನೆಗೂ ದಾಳಿ ನಡೆಸಿದ್ದಾರೆ.
ಜೆಪಿನಗರದಲ್ಲಿ ಸುದೀಪ್, ನಿರ್ಮಾಪಕ ಜಯಣ್ಣ ಹೀಗೆ ಪ್ರಮುಖ ನಟರು ಮತ್ತು ನಿರ್ಮಾಪಕರು ಸೇರಿದಂತೆ ಅನೇಕರ ಮನೆ ಮೇಲೆ ಐಟಿ ದಾಳಿಯಾಗಿದೆ.
ಈ ಹಿಂದೆ ತೆರಿಗೆ ಪಾವತಿಸದಿದ್ದ ಬಾಲಿವುಡ್ನ ಘಟಾನುಘಟಿ ನಟ, ನಿರ್ಮಾಪಕರು, ನಿರ್ದೇಶಕರ ಮನೆ, ಕಚೇರಿ, ಸಂಬಂಧಿಕರ ಮನೆ ಮೇಲೆ ರೇಡ್ ಮಾಡಿ ಶಾಕ್ ನೀಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ಗೆ ಬಿಸಿಮುಟ್ಟಿಸಿದ್ದಾರೆ.
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಕೋಟಿ ಕೋಟಿ ಬಜೆಟ್ನಲ್ಲಿ ಚಿತ್ರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.