ಶಬರಿಮಲೆಗೆ ಮಹಿಳೆಯರ ಪ್ರವೇಶ: ಇಂದು ಕೇರಳ ಬಂದ್, ಘರ್ಷಣೆಗೆ 1 ಬಲಿ

ಶಬರಿಮಲೆ: ಮಹಿಳೆಯರು ಶಬರಿಮಲೆಯ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಿದ ಬೆನ್ನಲ್ಲೇ ಕೇರಳದಾದ್ಯಂತ ನಡೆದ ಭಾರೀ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತ ಚಂದ್ರನ್​ ಉನ್ನಿತ್ತಾನ್​ ಎಂಬುವವರು ಮೃತಪಟ್ಟಿದ್ದಾರೆ.

ಇಬ್ಬರು ಮಹಿಳೆಯರು ದೇವಸ್ಥಾನ ಪ್ರವೇಶಿಸಿದ್ದನ್ನು ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಕೆಲ ಕಡೆಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪಥನಂತಿಟ್ಟ ಜಿಲ್ಲೆಯ ಪಂದಾಲಂನಲ್ಲಿ ಆರ್​ಎಸ್​ಎಸ್​​ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಚಂದ್ರನ್​ ಕಲ್ಲಿನ ದಾಳಿಗೆ ತುತ್ತಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಪ್ರತಿಭಟನಾಕಾರರ ಮೇಲೆ ದಾಳಿ ನಡೆದಿದ್ದರ ಹಿಂದೆ ಸಿಪಿಐಎಂ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದ್ದು, ತನಿಖೆಗೆ ಆದೇಶಿಸುವಂತೆ ಕೋರಿದೆ.

ಇಂದು ಕೂಡ ಕೇರಳದಾದ್ಯಂತ ಪ್ರತಿಭಟನೆ ಮುಂದುವರಿಸಲು ಆರ್​ಎಸ್​​ಎಸ್​ ಸೇರಿದಂತೆ ಅನೇಕ ಸಂಘಟನೆಗಳು ನಿರ್ಧರಿಸಿವೆ. ಕೇರಳದಲ್ಲಿ ಕಾಂಗ್ರೆಸ್​​ ಈ ದಿನವನ್ನು ‘ಕಪ್ಪು ದಿನ’ ಎಂದು ಆಚರಿಸಲು ಮುಂದಾಗಿದೆ. ಆರ್​ಎಸ್​ಎಸ್​ ಪ್ರತಿಭಟನೆಗೆ ಬಿಜೆಪಿ ಬೆಂಬಲ ನೀಡಿದೆ.

ಬಿಜೆಪಿ ಕಾರ್ಯಕರ್ತರು ಹಾಗೂ ಸಿಪಿಐಎಂ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟ ಪ್ರಕರಣಗಳು ಕೇರಳದಲ್ಲಿ ವರದಿಯಾಗಿವೆ. ತಿರುವನಂತಪುರದಲ್ಲಿರುವ ಸಿಪಿಐಎಂ ಕಚೇರಿಗಳ ಮೇಲೆ ಕೆಲವರು ದಾಳಿ ಮಾಡಿ ಧ್ವಂಸ ಮಾಡಿದ್ದಾರೆ. ಇದರ ಹಿಂದೆ ಬಿಜೆಪಿ ಕೈವಾಡವಿದೆ ಎಂಬುದು ಸಿಪಿಐಎಂ ವಾದ.

ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್​​ ಆದೇಶಿಸಿದ ಬೆನ್ನಲ್ಲೇ ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಮಹಿಳೆಯರು ದೇವಸ್ಥಾನ ಪ್ರವೇಶಿಸದಂತೆ ತಡೆ ನೀಡಿದ್ದರು. ಆದರೆ, ಬುಧವಾರ ಎರಡು ಮಹಿಳೆಯರು ದೇವಸ್ಥಾನ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು. ಇದಾದ ಬೆನ್ನಲೇ ಶುದ್ಧೀಕರಣಕ್ಕೋಸ್ಕರ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗಿತ್ತು.  ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.

ಕರ್ನಾಟಕದಿಂದ ಬಸ್ ಇಲ್ಲ: ಕೇರಳದಲ್ಲಿ ಪ್ರತಿಭಟನೆಗಳು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಕೇರಳಕ್ಕೆ ತೆರಳುವ ಎಲ್ಲ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ