ಬೆಂಗಳೂರು, ಜ.2-ಮನೆಗಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 15 ಲಕ್ಷ ರೂ.ಬೆಲೆಬಾಳುವ 505 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಗ್ಗನಹಳ್ಳಿ ಕ್ರಾಸ್ನ ಗಂಗಣ್ಣ (28) ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ಬಸವೇಶ್ವರ ನಗರ, ಮಹಾಲಕ್ಷ್ಮಿ ಲೇಔಟ್, ಯಲಹಂಕ, ಸುಬ್ರಹ್ಮಣ್ಯ ನಗರ, ಕಾಮಾಕ್ಷಿಪಾಳ್ಯ, ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಇತ್ತೀಚೆಗೆ ಪಶ್ಚಿಮ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳವು ಮತ್ತು ಕನ್ನಗಳವು ಪ್ರಕರಣಗಳ ಪತ್ತೆಗಾಗಿ ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪರಮೇಶ್ ಹೆಗಡೆ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದ ಇನ್ಸ್ಪೆಕ್ಟರ್ ಸೋಮಶೇಖರ್ ಮತ್ತು ಸಿಬ್ಬಂದಿ ಹಲವು ಮಾಹಿತಿಗಳನ್ನು ಕಲೆ ಹಾಕಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತನ ಬಂಧನದಿಂದ ಕಾಮಾಕ್ಷಿಪಾಳ್ಯದ ಎರಡು ಮನೆಗಳವು ಪ್ರಕರಣ, ಒಂದು ಕನ್ನಗಳವು ಹಾಗೂ ಸಾಮಾನ್ಯ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 505 ಗ್ರಾಂ ತೂಕದ 15 ಲಕ್ಷ ರೂ.ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.