ಬೆಂಗಳೂರು, ಜ.2- ಮುಂದಿನ 12 ವರ್ಷಗಳಲ್ಲಿ ಜನಸಂಖ್ಯೆ ಬೆಳವಣಿಗೆಗೆ ಪೂರಕವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸುವ ಸಂಬಂಧ ರಚಿಸಲಾಗಿರುವ ಸಿಡಿಪಿ ಕರಡು ಅಂಗೀಕಾರದ ಬಗ್ಗೆ ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಿಡಿಎ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬಿಡಿಎ 2031ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ ಸುಮಾರು ಎರಡು ಕೋಟಿಯಷ್ಟಾಗುವ ಅಂದಾಜು ಮಾಡಿದ್ದು, ಅಷ್ಟು ಜನರಿಗೆ ಅಗತ್ಯವಾದ ಸೌಲಭ್ಯ ಒದಗಿಸಲು ನಗರಾಭಿವೃದ್ಧಿ ಯೋಜನೆ (ಸಿಡಿಪಿ)ಯನ್ನು ಈಗಾಗಲೇ ತಯಾರಿಸಿದೆ.
ಕರಡು ಪ್ರತಿಗೆ 31,618 ಮಂದಿ ಆಕ್ಷೇಪಣೆ ಸಲ್ಲಿಸಿದ್ದರು.ಇನ್ನೂ ಒಂದಷ್ಟು ಮಂದಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯದ ಸೂಚನೆಯಂತೆ ಇನ್ನಷ್ಟು ಕಾಲಾವಕಾಶ ನೀಡಲು ಬಿಡಿಎ ಕೂಡ ಒಪ್ಪಿಕೊಂಡಿತ್ತು. ಹಿಂದಿನ ಸರ್ಕಾರದಲ್ಲಿ ಸಿದ್ದಪಡಿಸಿದ್ದ ಕರಡು ಪ್ರತಿ ಪ್ರಕಟಗೊಳ್ಳಬೇಕು ಎಂಬ ಹಂತದಲ್ಲಿ ವಿಧಾನಸಭೆ ಚುನಾವಣೆ ಎದುರಾಗಿ ನೀತಿಸಂಹಿತೆ ಜಾರಿಯಾಗಿತ್ತು. ಹಾಗಾಗಿ ಸಿಡಿಪಿ ಅಂತಿಮಗೊಳ್ಳಲಿಲ್ಲ.
ಹೊಸ ಸರ್ಕಾರ ಬಂದ ನಂತರ ಕೆಲವೊಂದು ಮಾರ್ಪಾಡು ಮಾಡಿದ್ದು, ಬೆಂಗಳೂರಿನ ಜಾಗತಿಕ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸುವಂತೆ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಒಂದಷ್ಟು ಹೊಸ ಯೋಜನೆಗಳನ್ನು ಸೇರ್ಪಡೆ ಮಾಡಿ ಮತ್ತೊಮ್ಮೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಲು ಬಿಡಿಎ ನಿರ್ಧರಿಸಿದೆ.
ಈಗಾಗಲೇ ಸ್ವೀಕಾರಗೊಂಡಿರುವ ಆಕ್ಷೇಪಣೆ ಮತ್ತು ಸಲಹೆಗಳ ಬಗ್ಗೆ ಸರ್ಕಾರದ ಅಭಿಪ್ರಾಯ ಕೇಳಲಾಗಿದ್ದು, ಸರ್ಕಾರ ಸಿಡಿಪಿ ಆಡಳಿತ ಮಂಡಳಿಯೇ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಹೀಗಾಗಿ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಸಿಡಿಪಿ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವ ಅಗತ್ಯವಿದ್ದು, ಅದಕ್ಕೆ ಪೂರ್ವ ಭಾವಿಯಾಗಿ ಇಂದು ಪರಮೇಶ್ವರ್ ಅವರು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಸ್ಟೀಲ್ ಬ್ರಿಡ್ಜ್, ಮೆಟ್ರೋ ವಿಸ್ತರಣೆ, ಕುಡಿಯುವ ನೀರಿನ ಸೌಲಭ್ಯ ಹೆಚ್ಚಳ, ಸಮೂಹ ಸಾರಿಗೆ ಬಳಕೆ ಹೆಚ್ಚಳ, ಉದ್ಯಾನವನ, ಅರಣ್ಯ ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ಹಲವಾರು ಮಹತ್ವದ ಹೊಸ ಯೋಜನೆಗಳನ್ನು ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು ಎನ್ನಲಾಗಿದೆ.
ಮುಂದಿನ ಬಿಡಿಎ ಸಭೆಯಲ್ಲಿ ಇವುಗಳ ಬಗ್ಗೆ ಚರ್ಚೆ ಮಾಡಿ ಅಧಿಕೃತವಾಗಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.