ಬೆಂಗಳೂರು,ಜ.2-ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 69ಸಾವಿರ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಲಾಗುತ್ತಿದ್ದು, ಶೇ.80ರಷ್ಟು ರೋಗಿಗಳು ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದಾರೆ.
ಇದೀಗ 2ನೇ ಸುತ್ತಿನ ಕಾರ್ಯಕ್ರಮವನ್ನು ರಾಜ್ಯದ 31 ಜಿಲ್ಲೆಗಳಲ್ಲಿ ಒಂದೇ ಹಂತದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಇಂದಿನಿಂದ 12ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಎಸಿಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರನ್ನು ಕೇಂದ್ರೀಕೃತವಾಗಿಸಿಕೊಂಡು ಸಕ್ರಿಯವಾಗಿ ಕ್ಷಯರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಹಾಗೂ ಚಿಕಿತ್ಸೆ ನೀಡುವ ಆಂದೋಲನವನ್ನು ಹಮ್ಮಿಕೊಂಡು ಕ್ಷಯರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಧ್ಯೇಯದೊಂದಿಗೆ ರೋಗಿಗಳ ಜೀವನ ಗುಣಮಟ್ಟ ಸುಧಾರಿಸಬಹುದಾಗಿದೆ.
ಈ ಕಾರ್ಯಕ್ರಮವನ್ನು ತೀಕ್ಷ್ಣಗೊಳಿಸುವ ದೃಷ್ಠಿಯಿಂದ 2018-10ನೇ ಸಾಲಿನಲ್ಲಿ ಮೊದಲ ಹಂತದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲವನ್ನು ಜು.2,2018ರಿಂದ ಜು.13ರವರೆಗೆ ನಡೆಸಲಾಗಿತ್ತು. ಈ ಆಂದೋಲನದಲ್ಲಿ ಸುಮಾರು 99900 ಜನರನ್ನು ತಪಾಸಣೆಗೆ ಒಳಪಡಿಸಿದ್ದು, ಸುಮಾರು 2987 ಹೊಸ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದೆ