
ಶ್ರೀನಗರ: ಭಾರತದ ಗಡಿಯೊಳಗೆ ನುಸುಳಿ ವಿಧ್ವಂಸಕ ಕೃತ್ಯವೆಸಗಲು ಮುಂದಾಗಿದ್ದ ಪಾಕಿಸ್ತಾನದ ಇಬ್ಬರು ಶಂಕಿತ ಯೋಧರನ್ನು ಭಾರತೀಯ ಸೈನಿಕರು ರಕ್ತವನ್ನು ಹೆಪ್ಪುಗಟ್ಟಿಸುವ ಚಳಿಯನ್ನೂ ಲೆಕ್ಕಿಸದೆ ದಟ್ಟಾರಣ್ಯದಲ್ಲಿ ಅಟ್ಟಾಡಿಸಿ ಹೊಡೆದು ಹಾಕಿದ್ದಾರೆ.
ಕಾಶ್ಮೀರದ ನೌಗಾಮ್ ಸೆಕ್ಟರ್ ಬಳಿ ಇರುವ ಗಡಿ ನಿಯಂತ್ರಣ ರೇಖೆ ದಾಟಿ ಭಾರತದ ಗಡಿಯೊಳಗೆ ನುಸುಳಿದ್ದ ಪಾಕಿಸ್ತಾನ ಸೇನೆಯ ಬಾರ್ಡರ್ ಆ್ಯಕ್ಷನ್ ಟೀಂ ನ ಇಬ್ಬರು ಪಾಕಿಸ್ತಾನಿ ಶಂಕಿತ ಸೈನಿಕರನ್ನು ಭಾರತೀಯ ಸೇನೆ ಸೈನಿಕರು ಹುಡುಕಿ ಹೊಡೆದು ಹಾಕಿದ್ದಾರೆ.
ನೌಗಾಮ್ ಸೆಕ್ಟರ್ ಬಳಿ ಶಂಕಿತರ ಚಲನವಲನಗಳ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಸೈನಿಕರು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಪಾಕಿಸ್ತಾನಿ ಸೈನಿಕರು ತಪ್ಪಿಸಿಕೊಳ್ಳಲು ದಟ್ಟಾರಣ್ಯದೊಳಗೆ ಓಡಿ ಹೋಗಿದ್ದಾರೆ. ಶಂಕಿತರನ್ನು ಹಿಂಬಾಲಿಸಿದ ಸೈನಿಕರು ದಟ್ಟಾರಣ್ಯದಲ್ಲಿ ಎನ್ ಕೌಂಟರ್ ನಡೆಸಿ ಇಬ್ಬರೂ ಪಾಕ್ ಸೈನಿಕರನ್ನು ಹೊಡೆದು ಹಾಕಿದ್ದಾರೆ. ಆರಂಭದಲ್ಲಿ ಇದು ಉಗ್ರರ ಕೃತ್ಯ ಎಂದು ಭಾವಿಸಲಾಗಿತ್ತಾದರೂ, ಬಳಿಕ ಮೃತದೇಹಗಳ ಸಮವಸ್ತ್ರ ಮತ್ತು ಸೇನಾ ಶಸ್ತ್ರಾಸ್ತ್ರಗಳಿಂದ ಮೃತರು ಪಾಕ್ ಸೈನಿಕರು ಎಂದು ತಿಳಿದುಬಂದಿದೆ.
ಅಂತೆಯೇ ಮೃತರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸೇನೆ ವಶಪಡಿಸಿಕೊಂಡಿದೆ. ಅಂತೆಯೇ ಅರಣ್ಯದಲ್ಲಿ ಪಾಕ್ ಸೈನಿಕರು ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಬಂಕರ್ ಮತ್ತು ಅದರೊಳಗಿದ್ದ ಭಾರಿ ಪ್ರಮಾಣದ ಸ್ಫೋಟಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಕಳೆದ ಸಾಕಷ್ಟು ದಿನಗಳಿಂದಲೇ ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆ ಮತ್ತು ಉಗ್ರರು ಸಂಚು ಹೆಣೆದಿದ್ದು, ಇದೇ ಕಾರಣಕ್ಕೆ ದಟ್ಟಾರಣ್ಯದಲ್ಲಿ ರಹಸ್ಯ ಬಂಕರ್ ನಿರ್ಮಾಣ ಮಾಡಿರುವ ಸಾಧ್ಯತೆ ಇದೆ ಎಂದು ಸೇನೆ ಶಂಕೆ ವ್ಯಕ್ತಪಡಿಸಿದೆ. ಅಲ್ಲದೆ ಶಂಕಿತ ಪಾಕ್ ಸೈನಿಕರನ್ನು ಹೊಡೆದು ಹಾಕಲಾಗಿದೆ. ಸೈನಿಕರ ಶವಗಳನ್ನು ವಶಕ್ಕೆ ಪಡಯುವಂತೆ ಪಾಕ್ ಸೇನೆಗೆ ಮಾಹಿತಿ ಕೂಡ ನೀಡಲಾಗಿದೆ ಎಂದು ತಿಳಿದುಬಂದಿದೆ.