ಬೆಂಗಳೂರು, ಡಿ.31-ಮೇಕೆದಾಟು ಯೋಜನೆಯನ್ನು ಸರ್ಕಾರ ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕೂಡಲೇ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಆರಂಭಿಸಿ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ಅವರು, ಈ ಯೋಜನೆ ಗೆ ಸುಪ್ರೀಂಕೋರ್ಟ್ ತಡೆಯಿಲ್ಲ, ಕೇಂದ್ರ ಸರ್ಕಾರದ ಆಕ್ಷೇಪವಿಲ್ಲದಿದ್ದರೂ ಅನಗತ್ಯವಾಗಿ ರಾಜ್ಯಸರ್ಕಾರವೇ ವಿಳಂಬ ಮಾಡುತ್ತಿದೆ. ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಸರ್ಕಾರ ವಿಳಂಬ ಮಾಡುತ್ತಿರುವ ಉದ್ದೇಶವಾದರೂ ಏನು? ಕಾಲು ಕೆರೆದುಕೊಂಡು ಗಾಯ ಮಾಡಿಕೊಳ್ಳುವ ಪರಿಸ್ಥಿತಿ ಏಕೆ?ತಮಿಳುನಾಡಿನೊಂದಿಗೆ ಮಾತನಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಮಾತನಾಡಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ದುಂಬಾಲು ಏಕೆ ಬೀಳಬೇಕು.ಈ ಯೋಜನೆಗೆ ಅನುದಾನ ಎಷ್ಟು ಮೀಸಲಿಡಲಾಗಿದೆ.ಯಾವ ರೀತಿ ನೀಲನಕ್ಷೆ ರೂಪಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ವಾಟಾಳ್ ಒತ್ತಾಯಿಸಿದರು.
ನಮ್ಮ ಎಲ್ಲಾ ಯೋಜನೆಗಳಿಗೆ ತಮಿಳುನಾಡು ಸರ್ಕಾರ ತಕರಾರು ತೆಗೆಯುವುದು ಸಾಮಾನ್ಯವಾಗಿದೆ.ಅದೇ ರೀತಿ ಈ ಯೋಜನೆಗೂ ಆಕ್ಷೇಪ ವ್ಯಕ್ತಪಡಿಸುತ್ತದೆ. ಆದರೆ ನ್ಯಾಯಾಲಯ, ಕೇಂದ್ರ ಸರ್ಕಾರ ನಮ್ಮ ಪರ ನಿಲುವು ವ್ಯಕ್ತಪಡಿಸಿದ್ದು, ಆದರೆ ಹೀಗಿರುವಾಗ ಯೋಜನೆ ಪ್ರಾರಂಭ ಮಾಡಲು ವಿಳಂಬ ಮಾಡುತ್ತಿರುವುದು ಏಕೆ ಎಂದು ಹೇಳಿದರು.
ತಮಿಳುನಾಡಿನವರು ರಾಜಕೀಯ ದುರುದ್ದೇಶದಿಂದ ಅಡ್ಡಿ ಪಡಿಸುತ್ತಿದ್ದಾರೆ. ಇದನ್ನು ನಾವು ಎದುರಿಸಿ ನಿಲ್ಲಬೇಕು. ಕೂಡಲೇ ಯೋಜನೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ರಾಮನಗರದ ಐಜೂರು ಸರ್ಕಲ್ನಲ್ಲಿ ಕೂಡ ಪ್ರತಿಭಟನೆ ನಡೆಸಲಾಯಿತು.
ನಾಳೆ ಬೆಳಿಗ್ಗೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು, ಕನ್ನಡಿಗರಿಗೆ ಉದ್ಯೋಗ ಸಿಗಬೇಕು, ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ಆದ್ಯತೆ ದೊರೆಯಬೇಕು, ರಾಜ್ಯದಲ್ಲಿ ಕನ್ನಡಕ್ಕೆ ಸಮಗ್ರ ಮಾನ್ಯತೆ ನೀಡಬೇಕು ಎಂಬ ನಿಟ್ಟಿನಲ್ಲಿ ನೂರಕ್ಕೂ ಹೆಚ್ಚು ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.