ಜಮ್ಮು-ಕಾಶ್ಮೀರದ ನೌಗಮ್ ಸೆಕ್ಟರ್ ನಲ್ಲಿ ಅಕ್ರಮವಾಗಿ ಗಡಿ ನುಸುಳುತ್ತಿದ್ದ ಇಬ್ಬರು ಪಾಕ್ ಯೋಧರನ್ನು ಹತ್ಯೆಗೈದ ಭಾರೀತ ಸೇನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನೌಗಮ್‌ ಸೆಕ್ಟರ್‌ನಲ್ಲಿ ಅಕ್ರಮವಾಗಿ ಗಡಿ ನಿಯಂತ್ರಣ ರೇಖೆ ಬಳಿ ನುಗ್ಗಲು ಯತ್ನಿಸಿದ್ದ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್‌ ನ ಇಬ್ಬರು ಯೋಧರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಹತ್ಯೆಯಾದ ಪಾಕ್‌ ಯೋಧರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಗಡಿಯೊಳಗೆ ನುಸುಳಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಕುರಿತು ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಭಾರತೀಯ ಸೇನೆಯು ಗಡಿನಿಯಂತ್ರಣ ರೇಖೆಯುದ್ದಕ್ಕೂ ಹದ್ದಿನಕಣ್ಣಿಟ್ಟಿತ್ತು. ಈ ವೇಳೆ ಗಡಿಯೊಳಗೆ ನುಸುಳಲು ಮುಂದಾಗಿದ್ದ ಪಾಕ್ ಬಿಎಟಿಯ ಇಬ್ಬರು ಯೋಧರನ್ನು ಸೇನೆ ಹತ್ಯೆಗೈದಿದೆ. ಈ ಮೂಲಕ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ನಡೆಯಬಹುದಾಗಿದ್ದ ಭಾರೀ ವಿಧ್ವಂಸಕ ಕೃತ್ಯವನ್ನು ಭಾರತೀಯ ಸೇನೆ ತಡೆದಿದೆ.

ನುಸುಳುಕೋರರು ಪಾಕಿಸ್ತಾನಿ ಯೋಧರಂತೆಯೇ ಸಮವಸ್ತ್ರವನ್ನು ಧರಿಸಿದ್ದರು. ಸೈನಿಕರು ಶೋಧ ಕಾರ್ಯ ನಡೆಸಿದ ವೇಳೆ ಎಲ್‌ಒಸಿ ಬಳಿಯಿಂದ ದಟ್ಟಾರಣ್ಯವನ್ನು ಬಳಸಿಕೊಂಡು ಕಣ್ಮರೆಯಾಗಿದ್ದಾರೆ. ಕೆಲ ನುಸುಳುಕೋರರು ಬಿಎಸ್‌ಎಫ್‌ ಯೋಧರಂತೆಯೇ ಕಂಡು ಬಂದಿದ್ದು, ಹಳೆ ಮಾದರಿಯ ಭಾರತೀಯ ಸೇನೆಯ ಉಡುಪುಗಳನ್ನೇ ಧರಿಸಿದ್ದರು. ಅವರ ಬಳಿ ಸುಧಾರಿತ ಸ್ಫೋಟಕ ಸಾಧನ, ಬೆಂಕಿಯಿಡುವ ವಸ್ತುಗಳು, ಸ್ಫೋಟಕಗಳು, ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳು ಇದ್ದವು.

ಈ ವೇಳೆ ಪಾಕಿಸ್ತಾನದ ಕಡೆಯಿಂದ ಆರಂಭವಾದ ಗುಂಡಿನ ದಾಳಿಗೆ ಭಾರತ ಸೇನೆ ತಕ್ಕ ಉತ್ತರವನ್ನೇ ನೀಡಿದೆ. ದಟ್ಟಾರಣ್ಯದಲ್ಲಿ ಭಾರತೀಯ ಸೇನೆ ಶೋಧ ಕಾರ್ಯ ಕೈಗೊಂಡು ಇಬ್ಬರು ಪಾಕ್‌ ಯೋಧರನ್ನು ಹೊಡೆದುರುಳಿಸಿದೆ.

ಸದ್ಯ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಪಾಕಿಸ್ತಾನದ ಕಡೆಯಿಂದಾಗುತ್ತಿದ್ದ ಗುಂಡಿನ ದಾಳಿ ಮತ್ತು ಪ್ರತಿಕೂಲ ಹವಾಮಾನ ಮತ್ತು ಗೋಚರತೆಯ ಪರಿಸ್ಥಿತಿಯಿಂದಾಗಿ ಇನ್ನು ಕೆಲ ನುಸುಳುಕೋರರು ತಪ್ಪಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Army foils New Year’s eve attack by Pakistan’s Border Action Team along LoC, kills 2 intruders

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ