ನವದೆಹಲಿ : ಯುಪಿಎ ಸರ್ಕಾರದ ಅವಧಿಯಲ್ಲಿ ಸೋನಿಯಾ ಗಾಂಧಿಯಾಗಲಿ, ರಾಹುಲ್ ಗಾಂಧಿಯಾಗಲಿ ರಕ್ಷಣಾ ಒಪ್ಪಂದಗಳಲ್ಲಿ ಎಂದಿಗೂ ಮಧ್ಯಪ್ರವೇಶಿಸಿರಲಿಲ್ಲ ಎಂದು ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.
ಅಗಾಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಕುರಿತು ಕೇಂದ್ರ ಎನ್ ಡಿಎ ಸರ್ಕಾರ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಪ್ರಚಾರ ನಡೆಸಿದೆ ಎಂದು ಆರೋಪಿದ್ದಾರೆ. ಅಲ್ಲದೇ ಸರ್ಕಾರ ಹಾಗೂ ಬಿಜೆಪಿಗರು ಸುಳ್ಳು ಸುದ್ದಿ ಹರಡಲು ತನಿಖಾ ಏಜನ್ಸಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆಂಟನಿ ವಾಗ್ದಾಳಿ ನಡೆಸಿದ್ದಾರೆ.
ಅಗಸ್ಟಾ ವೆಸ್ಟ್ಲ್ಯಾಂಡ್ ಒಪ್ಪಂದದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಯಾವ ಪಾತ್ರವನ್ನೂ ವಹಿಸಿಲ್ಲ. ಅಲ್ಲದೇ ತಮ್ಮ ಅಧಿಕಾರದ ಅವಧಿಯಲ್ಲಿ ರಕ್ಷಣಾ ವಿಚಾರದಲ್ಲು ಅವರು ಎಂದಿಗೂ ಮಧ್ಯಪ್ರವೇಶ ಮಾಡಿಲ್ಲ ಎಂದು ತಿಳಿಸಿದರು.
ಯಾವುದೇ ಸತ್ಯದ ನೆಲಗಟ್ಟಿಲ್ಲದೆ ಕೇವಲ ರಾಜಕೀಯ ಕಾರಣಕ್ಕಾಗಿ ಸರ್ಕಾರ ಸೋನಿಯಾ ಅವರ ಹೆಸರನ್ನು ಹಗರಣದಲ್ಲಿ ಸಿಲುಕಿಸಲು ಹೊರಟಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.
ವಿವಿಐಪಿ ಹೆಲಿಕಾಪ್ಟರ್ ವ್ಯವಹಾರದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದ ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಕಂಪನಿಯನ್ನು ಬ್ಲ್ಯಾಕ್ ಲಿಸ್ಟ್ (ಕಪ್ಪು ಪಟ್ಟಿ)ಗೆ ಸೇರಿಸಲು ಸೂಚಿಸಿತ್ತು. ಅಲ್ಲದೇ ಯುಪಿಎ ಸರ್ಕಾರ ಮಿಲಾನ್ ನ್ಯಾಯಾಲಯದಲ್ಲಿ ಕಾಪ್ಟರ್ ತಯಾರಿಕಾ ಸಂಸ್ಥೆಯ ವಿರುದ್ಧ “ಅಸಾಧಾರಣವಾಗಿ” ಹೋರಾಡಿದೆ ಮತ್ತು ಅದನ್ನು ಗೆದ್ದಿದೆ ಎಂದು ಆಂಟನಿ ಸಮರ್ಥಿಸಿಕೊಂಡಿದ್ದಾರೆ.
ನಾವು ಒಪ್ಪಂದವನ್ನು ರದ್ದುಗೊಳಿಸಿದ್ದೇವೆ ಮತ್ತು ಕಪ್ಪುಪಟ್ಟಿಗೆ ಸೇರಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದೆವು. ಆದರೆ ನಮ್ಮ ನಂತರ ಬಂದ ಮೋದಿ ಸರ್ಕಾರ ಮೋದಿ ಸರ್ಕಾರವು ಅಗಸ್ಟ ವೆಸ್ಟ್ಲ್ಯಾಂಡ್ ಬಗ್ಗೆ ಏನೂ ಮಾಡಲಿಲ್ಲ.ಕಂಪೆನಿಯ ವಿರುದ್ಧ ಕ್ರಮ ಜರುಗಿಸುವುದರ ಬದಲು ಕಂಪನಿಗೆ ಅವರು ಒಲವು ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಕಾಂಗ್ರೆಸ್ ಈ ಪ್ರಕರಣವನ್ನು ಮರೆಮಾಚಲು ಹೊರಟಿದ್ದರೆ ನಾವೇಕೆ ಸಿಬಿಐ ತನಿಖೆಗೆ ಆದೇಶಿಸುತ್ತಿದ್ದೆವು?ಅಲ್ಲದೆ ಹೋರಾಟ ನಡೆಸಲು ಇಟಲಿಗೆ ಏಕೆ ತೆರಳಿದ್ದೆವು ಎಂದು ಅವರು ಪ್ರಶ್ನಿಸಿದ್ದಾರೆ.
AgustaWestland case,A k antony,Sonia gandhi, Rahul Gandhi never interfered in deals