ಬಾಂಗ್ಲಾ ಚುನಾವಣೆ: ಭುಗಿಲೆದ್ದ ಹಿಂಸಾಚಾರದಲ್ಲಿ ಓರ್ವ ಅಧಿಕಾರಿ ಸೇರಿ 10 ಜನ ಬಲಿ

ಢಾಕಾ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಭುಗಿಲೆದ್ದ ಹಿಂಸಾಚಾರದಲ್ಲಿ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿ ಸೇರಿ 10 ಮಂದಿ ಸಾವನ್ನಪ್ಪಿದ್ದಾರೆ.

ಕೊಮಿಲ್ಲಾ ಜಿಲ್ಲೆಯಲ್ಲಿ ಇಬ್ಬರು, ಛತ್ತೋಗ್ರಾಂ, ರಾಜ್​ಶಾಹಿ, ದಿನಾಜ್ಪುರ್, ರಂಗಮತಿ, ಕಾಕ್ಸ್​ ಬಜಾರ್​, ಬೋಗುರ ಮತ್ತು ನೋವಾಖಾಲಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

​ಘರ್ಷಣೆಗಳನ್ನು ತಡೆಯುವ ದೃಷ್ಟಿಯಿಂದ ಮುಂಜಾಗ್ರತೆ ಕ್ರಮವಾಗಿ ಬಿಗಿ ಪೊಲೀಸ್​ ಬಂದೋಬಸ್ತ್​ ವ್ಯವಸ್ಥೆ ಒದಗಿಸಿತ್ತಾದರೂ ದೇಶಾದ್ಯಂತ ನಡೆದ ಹಿಂಸಾಚಾರದಲ್ಲಿ 64 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಾಂಗ್ಲಾದೇಶ ನ್ಯಾಷನಲಿಸ್ಟ್​ ಪಾರ್ಟಿ (ಬಿಎನ್​ಪಿ) ಮತ್ತು ಅವಾಮಿ ಲೀಗ್​ ಬೆಂಬಲಿಗರೊಂದಿಗೆ ನಡೆದ ಗಲಭೆಯಿಂದ ಬಿಎನ್​ಪಿ ಬೆಂಬಲಿಗ ರಾಜ್​ಶಾಹಿಯಲ್ಲಿ ಮೃತಪಟ್ಟಿರುವುದು ತಿಳಿದು ಬಂದಿದೆ.

ಹೆಚ್ಚಿನ ಗಲಭೆ ತಡೆಯಲು ದೇಶಾದ್ಯಂತ ಮೊಬೈಲ್​ ಇಂಟರ್​ನೆಟ್​ ಸೇವೆ ರದ್ದು ಮಾಡಲಾಗಿದೆ.

ಬಾಂಗ್ಲಾದೇಶದ 11ನೇ ಅವಧಿಯ ಸಂಸತ್ ಚುನಾವಣೆಗೆ ಮತದಾನ ನಡೆದಿದ್ದು, 10.4 ಕೋಟಿಗೂ ಹೆಚ್ಚು ಮತದಾರರು ಹಕ್ಕು ಚಲಾಯಿಸಿದ್ದಾರೆ. ಚುನಾವಣೆಯಲ್ಲಿ ಶೇಖ್​ ಹಸೀನಾ ಅವರ ಅವಾಮಿ ಲೀಗ್​ ಮತ್ತು ಖಲೇದಾ ಜಿಯಾ ಅವರ ನೇತೃತ್ವದ (ಜತಿಯಾ ಓಕಿಯಾ ಫ್ರಂಟ್​) ನ್ಯಾಷನಲ್​ ಯೂನಿಟಿ ಫ್ರಂಟ್​ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

10ನೇ ಅವಧಿಯಲ್ಲಿ ದೇಶದ ಪ್ರಧಾನಿಯಾಗಿದ್ದ ಶೇಖ್​ ಹಸೀನಾ ಈ ಬಾರಿ ಗೆದ್ದರೆ ಅದು ಅವರ ಹ್ಯಾಟ್ರಿಕ್​ ಗೆಲುವಾಗಲಿದೆ.300 ಸ್ಥಾನಗಳುಳ್ಳ ಬಾಂಗ್ಲಾದೇಶದಲ್ಲಿ ಅಧಿಕಾರ ಹಿಡಿಯಲು 151 ಸ್ಥಾನಗಳು ಅಗತ್ಯ.

Bangladesh election,deadly violence

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ