ಢಾಕಾ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಭುಗಿಲೆದ್ದ ಹಿಂಸಾಚಾರದಲ್ಲಿ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿ ಸೇರಿ 10 ಮಂದಿ ಸಾವನ್ನಪ್ಪಿದ್ದಾರೆ.
ಕೊಮಿಲ್ಲಾ ಜಿಲ್ಲೆಯಲ್ಲಿ ಇಬ್ಬರು, ಛತ್ತೋಗ್ರಾಂ, ರಾಜ್ಶಾಹಿ, ದಿನಾಜ್ಪುರ್, ರಂಗಮತಿ, ಕಾಕ್ಸ್ ಬಜಾರ್, ಬೋಗುರ ಮತ್ತು ನೋವಾಖಾಲಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಘರ್ಷಣೆಗಳನ್ನು ತಡೆಯುವ ದೃಷ್ಟಿಯಿಂದ ಮುಂಜಾಗ್ರತೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಒದಗಿಸಿತ್ತಾದರೂ ದೇಶಾದ್ಯಂತ ನಡೆದ ಹಿಂಸಾಚಾರದಲ್ಲಿ 64 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಮತ್ತು ಅವಾಮಿ ಲೀಗ್ ಬೆಂಬಲಿಗರೊಂದಿಗೆ ನಡೆದ ಗಲಭೆಯಿಂದ ಬಿಎನ್ಪಿ ಬೆಂಬಲಿಗ ರಾಜ್ಶಾಹಿಯಲ್ಲಿ ಮೃತಪಟ್ಟಿರುವುದು ತಿಳಿದು ಬಂದಿದೆ.
ಹೆಚ್ಚಿನ ಗಲಭೆ ತಡೆಯಲು ದೇಶಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆ ರದ್ದು ಮಾಡಲಾಗಿದೆ.
ಬಾಂಗ್ಲಾದೇಶದ 11ನೇ ಅವಧಿಯ ಸಂಸತ್ ಚುನಾವಣೆಗೆ ಮತದಾನ ನಡೆದಿದ್ದು, 10.4 ಕೋಟಿಗೂ ಹೆಚ್ಚು ಮತದಾರರು ಹಕ್ಕು ಚಲಾಯಿಸಿದ್ದಾರೆ. ಚುನಾವಣೆಯಲ್ಲಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಮತ್ತು ಖಲೇದಾ ಜಿಯಾ ಅವರ ನೇತೃತ್ವದ (ಜತಿಯಾ ಓಕಿಯಾ ಫ್ರಂಟ್) ನ್ಯಾಷನಲ್ ಯೂನಿಟಿ ಫ್ರಂಟ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
10ನೇ ಅವಧಿಯಲ್ಲಿ ದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಈ ಬಾರಿ ಗೆದ್ದರೆ ಅದು ಅವರ ಹ್ಯಾಟ್ರಿಕ್ ಗೆಲುವಾಗಲಿದೆ.300 ಸ್ಥಾನಗಳುಳ್ಳ ಬಾಂಗ್ಲಾದೇಶದಲ್ಲಿ ಅಧಿಕಾರ ಹಿಡಿಯಲು 151 ಸ್ಥಾನಗಳು ಅಗತ್ಯ.
Bangladesh election,deadly violence