ಬೆಂಗಳೂರು, ಡಿ.29- ಯಾವುದೇ ಕಾರಣಕ್ಕೂ ಸಾರ್ವಜನಿಕರ ಅಹವಾಲುಗಳನ್ನು ತಡೆಹಿಡಿಯಬೇಡಿ ಎಂದು ಅಧಿಕಾರಿಗಳಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೂಚಿಸಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಬ್ಯಾಂಕರ್ಸ್ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಯಾವ ರೀತಿ ಪರಿಹಾರ ಕಲ್ಪಿಸಬಹುದು ಎಂಬ ಮನೋಭಾವವನ್ನು ಬೆಳೆಸಿಕೊಳ್ಳಿ, ಸದ್ಯಕ್ಕೆ ಕೆಲಸ ಆಗಲ್ಲ ಎಂದು ವಾಪಸ್ ಕಳುಹಿಸಬೇಡಿ, ಸಾಧ್ಯವಾದಷ್ಟು ಶೀಘ್ರವಾಗಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಿ ಎಂದು ಆದೇಶಿಸಿದರು.
ಮಂತ್ರಿಗಳಿಂದ ಶಹಭಾಷ್ಗಿರಿ ಪಡೆಯುವ ಬದಲು ಉತ್ತಮ ಕೆಲಸ ಮಾಡಿ ಜನರಿಂದ ಶಹಭಾಷ್ಗಿರಿ ಪಡೆಯಿರಿ.ಅದೇ ನಿಮಗೆ ಕಿರೀಟವಿದ್ದಂತೆ ಎಂದು ಹೇಳಿದರು.
ಸರ್ಕಾರದ ಪ್ರತಿನಿಧಿಗಳು ಯೋಜನೆಗಳನ್ನು ರೂಪಿಸುತ್ತಾರೆ.ಅದನ್ನು ಅನುಷ್ಠಾನಗೊಳಿಸುವವರು ಅಧಿಕಾರಿಗಳು.ಯೋಜನೆಗಳ ಯಶಸ್ಸು ಅನುಷ್ಠಾನದ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಯೋಜನೆಗಳ ಶೀಘ್ರ ಅನುಷ್ಠಾನವಾಗಲಿ ಎಂದರು.
ಪ್ರಗತಿ ಪರಿಶೀಲನಾ ಸಭೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಬೇಕು.ಒಂದು ವೇಳೆ ಇಂತಹ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸದಾನಂದಗೌಡ ಎಚ್ಚರಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ಯೋಜನೆಗಳಿಗೆ ಸಾಲ ನೀಡುವ ಬ್ಯಾಂಕ್ಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಬೆಂಗಳುರು ನಗರ ಜಿಲ್ಲಾ ಪಂಚಾಯತ್ ಸಿಇಒ ಅರ್ಚನಾ, ಲೀಡ್ ಬ್ಯಾಂಕ್ನ ಜಿಲ್ಲಾ ಪ್ರಬಂಧಕ ಕೆ.ಎನ್.ಮಂಜುನಾಥ್, ನಬಾರ್ಡ್ನ ಪ್ರಭಾ ಮತ್ತಿತರರಿದ್ದರು.