ಘಾಜಿಪುರ್: ರೈತರ ಸಾಲಮನ್ನಾದ ಭರವಸೆ ನೀಡುವ ಮೂಲಕ ಕಾಂಗ್ರೆಸ್ ರೈತರಿಗೆ ಮೋಸ ಮಾಡಿದೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಉತ್ತರಪ್ರದೇಶದ ಘಾಜಿಯಾಪುರದಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾನು ಚೌಕಿದಾರನಾಗಿ ಕಳ್ಳರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಆದರೆ, ಅವರು ಸೂಕ್ತವಾದ ಸ್ಥಳವನ್ನೇ ತಲುಪಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ನಮ್ಮ ಸರ್ಕಾರವು ಬಡವರು ಮತ್ತು ರೈತರನ್ನು ಮೇಲಕ್ಕೆತ್ತಲು ಬದ್ಧವಾಗಿದೆ. ಆದರೆ, ಇತರರು ಸಾಲಮನ್ನಾ ಎನ್ನುವ ಲಾಲಿಪಾಪ್ ಆಸೆಯನ್ನು ತೋರಿಸುವ ಮೂಲಕ ರಾಜಕೀಯ ಲಾಭವನ್ನು ಮಾಡಿಕೊಳ್ಳಲು ಹೊರಟಿದ್ದಾರೆ. ಕಾಂಗ್ರೆಸ್ ನ ಈ ಸಂಚಿಗೆ ಸಿಲುಕಿಕೊಳ್ಳಬೇಡಿ ಎಂದರು.
ಕಾಂಗ್ರೆಸ್ ನಾಯಕರು ನೀಡಿರುವ ರೈತರ ಸಾಲಮನ್ನಾ ಭರವಸೆ ರೈತರ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಸರ್ಕಾರ ಸಾಲಮನ್ನಾ ಭರವಸೆ ನೀಡಿ ರೈತರಿಗೆ ಮೋಸ ಮಾಡುತ್ತಿದೆ ಎಂದು ಕಿಡಿಕಾರಿದರು.
2009 ರ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ರೈತರಿಗೆ ಇಂತಹದ್ದೇ ಭರವಸೆಯನ್ನೇ ನೀಡಿತ್ತು. ಅದರಿಂದ ನಿಮ್ಮ ಸಾಲಮನ್ನಾವಾಯಿತೇ? ನಿಮ್ಮ ಖಾತೆಗಳಲ್ಲಿ ಹಣ ತುಂಬಿತೆ? ಸಾರ್ವಜನಿಕರಿಗೆ ಮೋಸ ಮಾಡುವ ಇಂತಹ ಜನರನ್ನು, ನೀವು ನಂಬುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಹೊಂದಿದ್ದ ಸ್ವಾಮಿನಾಥನ್ ಕಮಿಷನ್ ವರದಿಯನ್ನು ಸಹ ಜಾರಿಗೆ ತಂದಿಲ್ಲ. 11 ವರ್ಷಗಳ ಹಿಂದೆಯೇ ವರದಿಯನ್ನು ಜಾರಿಗೆ ತಂದಿದ್ದರೆ ಇಂದು ಸಾಲಮನ್ನಾ ಮಾಡುವ ಅಗತ್ಯವಿರಲಿಲ್ಲ. ನಮ್ಮ ಸರ್ಕಾರವು ರೈತರು ಮತ್ತು ಸಮಾಜದ ಇತರೆ ವರ್ಗಗಳ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
PM Modi attacks Cong on loan waiver promises