ಬೆಂಗಳೂರು,ಡಿ.29- ಅನ್ನದಾತನಿಗೆ ಹೊಸ ವರ್ಷದ ಭರ್ಜರಿ ಗಿಫ್ಟ್ ನೀಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಉದ್ದೇಶಿತ ಯೋಜನೆಯನ್ನು ಕರ್ನಾಟಕದಿಂದಲೇ ಪ್ರಾರಂಭಿಸಲು ಮುಂದಾಗಿದ್ದಾರೆ.
ಸದ್ಯದಲ್ಲೇ ಬೆಂಗಳೂರು ಇಲ್ಲವೇ ರಾಜ್ಯದ ಪ್ರಮುಖ ಸ್ಥಳವೊಂದರಲ್ಲಿ ಬೃಹತ್ ರೈತರ ಸಮಾವೇಶ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರೇ ಮುಖ್ಯ ಅತಿಥಿಗಳಾಗಿ ಆಗಮಿಸುವ ನಿರೀಕ್ಷೆಯಿದೆ.ಕೇಂದ್ರ ಸರ್ಕಾರ ರೈತರಿಗೆ ಘೋಷಣೆ ಮಾಡಲು ಉದ್ದೇಶಿಸಿರುವ ನೂತನ ಯೋಜನೆಯನ್ನು ಕರುನಾಡಿನಿಂದಲೇ ಘೋಷಣೆ ಮಾಡಬೇಕೆಂದು ಬಿಜೆಪಿ ಬಯಸಿದೆ.
ಪ್ರಸ್ತುತ ನವದೆಹಲಿಯಲ್ಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿಯವರ ಭೇಟಿಗೆ ಸಮಯಾವಕಾಶವನ್ನು ಕೇಳಿದ್ದಾರೆ. ಒಂದು ವೇಳೆ ಪ್ರಧಾನಿಯವರು ಬರುವುದಕ್ಕೆ ಒಪ್ಪಿದರೆ ಈ ನೂತನ ಯೋಜನೆ ಅಂದೇ ಘೋಷಣೆಯಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ವಿಧಾನಸಭೆ ಚುನಾವಣೆ ನಂತರ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸುತ್ತಿರುವುದು ಇದೇ ಮೊದಲು. ಈ ಕಾರ್ಯಕ್ರಮವನ್ನು ಐತಿಹಾಸಿಕವಾಗಿ ನಡೆಸಲು ಬಿಜೆಪಿ ತೀರ್ಮಾನಿಸಿದೆ.
2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಂದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ ಚುನಾವಣೆಗೆ ರಣ ಕಹಳೆ ಮೊಳಗಿಸಿದ್ದರು.
ಇದೀಗ ಬಿಜೆಪಿ ಇದೇ ತಂತ್ರವನ್ನು ಅನುಸರಿಸುತ್ತಿದೆ. ಸುಮಾರು 4ರಿಂದ 5 ಲಕ್ಷ ಕಾರ್ಯಕರ್ತರನ್ನು ಒಗ್ಗೂಡಿಸಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಡ್ಡು ಹೊಡೆಯುವುದು ಇದರ ಉದ್ದೇಶ.
ಸಾಮಾನ್ಯವಾಗಿ ಯಡಿಯೂರಪ್ಪನವರ ಮಾತನ್ನು ನರೇಂದ್ರ ಮೋದಿಯವರು ತಳ್ಳಿಹಾಕುವುದಿಲ್ಲ. ಏಕೆಂದರೆ ಹಲವರ ವಿರೋಧದ ನಡುವೆಯೇ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕೆಂದು ಪಕ್ಷಕ್ಕೆ ನೇರವಾಗಿ ಹೇಳಿದವರಲ್ಲಿ ಯಡಿಯೂರಪ್ಪ ಮೊದಲಿಗರು.ಈಗಲೂ ಕೂಡ ಅದೇ ಆತ್ಮೀಯತೆ, ವಿಶ್ವಾಸ ಇಬ್ಬರ ನಡುವೆ ಉಳಿದುಕೊಂಡಿದೆ.
ಕರ್ನಾಟಕದಿಂದಲೇ ಏಕೆ:
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರೈತರು ಸಹಕಾರಿ, ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್ಗಳಿಂದ ಪಡೆದಿರುವ ಸುಮಾರು 45 ಸಾವಿರ ಕೋಟಿ ಸಾಲಮನ್ನಾ ಘೋಷಣೆ ಮಾಡಿದೆ.
ಈಗಾಗಲೇ ಜಿಲ್ಲಾವಾರು ರೈತರಿಗೆ ಋಣಮುಕ್ತ ಪತ್ರ ನೀಡುವ ಕಾರ್ಯ ಪ್ರಾರಂಭವಾಗಿದೆ. ಒಂದೆಡೆ ಬಿಜೆಪಿಯವರು ರೈತರ ಯಾವುದೇ ಸಾಲ ಮನ್ನಾವಾಗಿಲ್ಲ. ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಇದಕ್ಕೆ ತಿರುಗೇಟು ನೀಡುತ್ತಿರುವ ಸರ್ಕಾರ ಕೇಂದ್ರದಲ್ಲಿ ನಿಮ್ಮ ಪಕ್ಷವೇ ಅಧಿಕಾರದಲ್ಲಿದೆ. ನಮ್ಮ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರಾಷ್ಟ್ರೀಕೃತ ಬ್ಯಾಂಕ್ಗಳ 74 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ದೆವು.
ರಾಜಸ್ಥಾನ, ಛತ್ತೀಸ್ಘಡ ಮತ್ತು ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದ 24 ಘಂಟೆಯಲ್ಲೇ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು.ಖಾಸಗಿಯವರ ಸಾಲ ಮನ್ನಾ ಮಾಡುವ ಮೋದಿಗೆ ರೈತರ ಸಾಲವನ್ನು ಮನ್ನಾ ಮಾಡಲು ಇರುವ ಅಡ್ಡಿಯಾದರೂ ಏನು ಎಂದು ಕಾಂಗ್ರೆಸಿಗರು ಪ್ರತಿದಿನ ಪ್ರಶ್ನೆ ಮಾಡುತ್ತಲೇ ಇದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ರೈತರ ಸಾಲಮನ್ನಾವೇ ಪ್ರಮುಖ ಅಸ್ತ್ರವಾಗಬಹುದೆಂಬ ಕಾರಣಕ್ಕಾಗಿ ಬಿಜೆಪಿ, ಕೇಂದ್ರ ಸರ್ಕಾರ ಅನ್ನದಾತನಿಗೆ ಜಾರಿ ಮಾಡಲು ಉದ್ದೇಶಿಸಿರುವ ನೂತನ ಯೋಜನೆಯನ್ನು ಕರ್ನಾಟಕದಿಂದಲೇ ಘೋಷಣೆ ಮಾಡಬೇಕೆಂದು ಇಲ್ಲಿನ ನಾಯಕರು ಮನವಿ ಮಾಡಿದ್ದಾರೆ.
ರಾಜ್ಯಕ್ಕೆ ಮೋದಿ ಭೇಟಿ ನೀಡಲಿದ್ದಾರೆಯೇ ಇಲ್ಲವೇ ಎಂಬುದು ಒಂದೆರಡು ದಿನಗಳಲ್ಲಿ ಖಚಿತವಾಗಲಿದೆ.